ಬಾಗಲಕೋಟೆ : ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಯ ಸದಸ್ಯರು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದ್ದು, ಇ-ಕೆವೈಸಿಗೆ ಸೆಪ್ಟೆಂಬರ್ 10 ಕೊನೆಯದಿನವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ 714 ನ್ಯಾಯಬೆಲೆ ಅಂಗಡಿಗಳಲ್ಲಿ ಪಾಯಿಂಟ್ ಆಪ್ ಸೇಲ್ ವ್ಯವಸ್ಥೆ ಅಳವಡಿಸಿ ಪಡಿತರ ವಿತರಣೆ ಮಾಡಲಾಗುತ್ತಿದ್ದು, ಈವರೆಗೆ ಒಟ್ಟು ಶೇ.74.45 ರಷ್ಟು ಪಡಿತರ ಚೀಟಿಯ ಹಾಗೂ ಶೇ.85.99 ರಷ್ಟು ಪಡಿತರ ಚೀಟಿಯ ಸದಸ್ಯರ ಇ-ಕೆವೈಸಿ ಕಾರ್ಯ ಪೂರ್ಣಗೊಂಡಿರುತ್ತದೆ.
ಚಾಲ್ತಿಯಲ್ಲಿರುವ ಪಡಿತರ ಚೀಟಿದಾರರು ಇಲ್ಲಿಯವರೆಗೆ ಇ-ಕೆವೈಸಿ ಮಾಡಿಸದೇ ಬಾಕಿ ಇರುವವರು ಮಾತ್ರ ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಹೋಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇ-ಕೆವೈಸಿ ಮಾಡಿಸಲು ಯಾವುದೇ ರೀತಿಯ ಶುಲ್ಕ ವಿರುವದಿಲ್ಲ. ಒಂದು ವೇಳೆ ಫಲಾನುಭವಿಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡು ಬರುವುದು ಕಡ್ಡಾಯವಾಗಿದೆ.
ಪ್ರತಿಯೊಬ್ಬರೂ ತಮ್ಮ ಎಲ್‍ಪಿಜಿ ಕನೆಕ್ಷನ್ ಪುಸ್ತಕ ಹಾಗೂ ಆಧಾರ್ ಕಾರ್ಡ್‌ದೊಂದಿಗೆ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು.
ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಕಾರರು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಅಂಗಡಿಯನ್ನು ತೆರೆದು ಕಡ್ಡಾಯವಾಗಿ ಇ-ಕೆವೈಸಿ ಮಾಡಲು ಸೂಚನೆ ನೀಡಿದ್ದಾರೆ.
ಈ ಕಾರ್ಯ ಸೆಪ್ಟೆಂಬರ್ 10 ವರೆಗೆ ನಡೆಯಲಿದ್ದು, ಅಪರ ಮುಖ್ಯ ಕಾರ್ಯದರ್ಶಿಗಳು ಆಹಾರ ಇಲಾಖೆ, ಬೆಂಗಳೂರು ಇವರು ಈ ಕಾರ್ಯಕ್ಕೆ ಅಂತಿಮ ಗಡುವು ನೀಡಿದ್ದಾರೆ.
ಕಾರಣ ಇ-ಕೆವೈಸಿ ಮಾಡಿಸದೇ ಇರುವ ಫಲಾನುಭವಿಗಳು ನಿಗದಿತ ಅವಧಿಯಲ್ಲಿ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸತಕ್ಕದ್ದು.
ಸೆಪ್ಟೆಂಬರ್ 11 ರಿಂದ ತಿಂಗಳ ಅಂತ್ಯದವರೆಗೆ ನಿಯಮಾನುಸಾರ ಎನ್.ಎಫ್.ಎಸ್.ಎ ಹಾಗೂ ಪಿಎಂಜಿಕೆವೈ ಯೋಜನೆಯಡಿ ಪಡಿತರ ವಿತರಣೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.