ವಿಜಯಪಥ ಸಮಗ್ರ ಸುದ್ದಿ
ಕಲಬುರಗಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಘೋಷಿಸಿರುವ ವಿಶೇಷ ಪ್ಯಾಕೇಜ್ ಅಸಂಘಟಿತ ವಲಯದಲ್ಲಿ ಬರುವ ಬಡ ಕ್ಷೌರಿಕರಿಗೆ (2 ಸಾವಿರ ರೂ.) ಅರೆಕಾಸಿನ ಮಜ್ಜಿಗೆಯಂತೆ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಕಲಬುರಗಿ ಜಿಲ್ಲಾ ಯೂತ್ ಪ್ರಧಾನ ಕಾರ್ಯದರ್ಶಿ ಎಂ.ಬಿ.ಹಡಪದ ಸುಗೂರ ಎನ್. ಅಲ್ಲಗಳೆದಿದ್ದಾರೆ.
ಎರಡನೇ ಅಲೆ ಕೊರೊನಾ ಸಂಕಷ್ಟದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಮ್ಮ ಸಮಾಜದವರ ಮೇಲೆ ಕಾಳಜಿ ಇದ್ದರೆ 10 ಸಾವಿರ ರೂ. ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಲಾಕ್ ಡೌನ್ ಹಿನ್ನೆಲೆಯಲ್ಲಿ ನೆರವಿಗೆ ಘೋಷಿಸಿರುವ ಒಟ್ಟು 1,250 ಕೋಟಿ ರೂ. ಪ್ಯಾಕೇಜ್ ಕೇವಲ ಕಾಟಾಚಾರದ್ದು, ಇದರಿಂದ ಬಡವರ ಹಿತ ಕಾಪಾಡಲು ಸಾಧ್ಯವಿಲ್ಲ ಎಂದ ಸುಗೂರ ಎನ್. 2020 ಸಾಲಿನ ಮೂದಲನೇಯ ಅಲೆ ಕೊರೊನಾ ಸಂಕಷ್ಟದಲ್ಲಿ ಸರ್ಕಾರ 5 ಸಾವಿರ ರೂ. ಪ್ಯಾಕೇಜ್ಅನ್ನು ಇದೇ ರೀತಿ ಘೊಷಿಸಿತ್ತಾದರೂ ನಮ್ಮ ಕ್ಷೌರಿಕ ವೃತ್ತಿ ಬಂಧುಗಳಿಗೆ 50% ರಷ್ಟು ಪರಿಹಾರ ಸಿಗಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಬಾರಿಯ ಪರಿಹಾರ ಮೊತ್ತ ವಿತರಣೆ ಜವಾಬ್ದಾರಿಯನ್ನು ಗ್ರಾಮ ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ನೀಡಲಿ. ಪಂಚಾಯ್ತಿ ಪಾಲಿಕೆಯವರು ತಮ್ಮ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕವಾಗಿ ಕ್ಷೌರಿಕ ವೃತ್ತಿ ಅವಲಂಬಿತರನ್ನು ಗುರುತಿಸಿ ಚೆಕ್ ಮೂಲಕ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.