ಶ್ರೀರಂಗಪಟ್ಟಣ: ಮದುವೆಯಾದರೆ ನಾವಿಬ್ಬರೂ ಬೇರೆಯಾಗಿಬಿಡುತ್ತೇವೆ ಎಂದು ಹೆದರಿಂದ ಅವಳಿ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹುಣಸನಹಳ್ಳಿ ಗ್ರಾಮದ ನಿವಾಸಿ ಸುರೇಶ್ ಎಂಬುವರ ಪುತ್ರಿಯರಾದ ದೀಪಿಕಾ (19), ದಿವ್ಯಾ (19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಂಬಾ ಅನ್ಯೂನ್ಯವಾಗಿದ್ದ ಸಹೋದರಿಯರು ಮದುವೆಯಾದರೆ ಇಬ್ಬರೂ ಬೇರೆಬೇರೆಯಾಗುತ್ತೇವೆ ಎಂದು ಯೋಚಿಸಿದ ಬೇರ್ಪಡಲು ಇಚ್ಛಿಸದೇ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಮನೆಯ ತಮ್ಮ ತಮ್ಮ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂತಿಮ ವರ್ಷದ ಡಿಪ್ಲೊಮಾ ಓದುತ್ತಿದ್ದ ಸಹೋದರಿಯರು ಚಿಕ್ಕಂದಿನಿಂದಲೂ ಅನ್ಯೂನ್ಯವಾಗಿದ್ದು ಸಾವಿನಲ್ಲೂ ಜತೆಯಾಗುವ ಕಟು ನಿರ್ಧಾರ ತೆಗೆದುಕೊಂಡು ಹೀಗೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇಬ್ಬರೂ ಹೆಣ್ಣು ಮಕ್ಕಳು ದೊಡ್ಡವರಾಗಿದ್ದಾರೆ. ಆದ್ದರಿಂದ ಅವಿಗೆ ಒಂದೇ ಬಾರಿಗೆ ಮದುವೆ ಮಾಡಿಬಿಡೋಣ ಎಂದು ದಿವ್ಯಾ ಹಾಗೂ ದೀಪಿಕಾ ಅವರ ತಂದೆ ಸುರೇಶ್ ಮತ್ತು ತಾಯಿ ಯಶೋದಾ ನಿರ್ಧರಿಸಿದ್ದರು.
ಇಬ್ಬರನ್ನೂ ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಪಾಲಕರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಬೇರೆ ಬೇರೆ ಮನೆಗಳನ್ನು ಸೇರಿದರೆ ತಮ್ಮ ಬಾಂಧವ್ಯಕ್ಕೆ ಎಲ್ಲಿ ಧಕ್ಕೆಯಾಗುತ್ತದೆ ಎಂದು ಹೆದರಿದ ಸಹೋದರಿಯರು ಸಂಜೆ ವೇಳೆಗೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರು ಪುತ್ರಿಯರನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತ್ತಿತ್ತು. ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.