ಕಲಬುರಗಿ: ಮಂಡ್ಯ ಜಿಲ್ಲೆ ರಾಜಕಾರಣ ಮತ್ತು ಅಕ್ರಮ ಗಣಿಗಾರಿಕೆ ಕುರಿತಂತೆ ಸಂಸದೆ ಸುಮಲತಾ ಅಂಬರೀಷ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪರಸ್ಪರ ಕಚ್ಚಾಡುವುದನ್ನು ಬಿಟ್ಟು ರಾಜ್ಯ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.
ಕಲಬುರಗಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾದಿ ಬೀದಿಯಲ್ಲಿ ಮತ್ತು ಮಾಧ್ಯಮಗಳ ಮುಂದೆ ಮಾತನಾಡುವುದರಿಂದ, ವಿಷಯ ಪ್ರಸ್ತಾಪ ಮಾಡುವುದರಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಜನಪ್ರತಿನಿಧಿಗಳ ವರ್ತನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಜಿಗುಪ್ಸೆ , ಬೇಸರ, ಅಸಮಾಧಾನ ಮೂಡಲಿದೆ. ಇದಕ್ಕೆ ಯಾರೊಬ್ಬರೂ ಅವಕಾಶ ಕೊಡಬಾರದು ಎಂದು ಸಲಹೆ ನೀಡಿದರು.
ಈ ವಿವಾದ ಇಲ್ಲಿಗೆ ನಿಲ್ಲಿಸಬೇಕು. ಎಲ್ಲರೂ ಒಟ್ಟಾಗಿ ರಾಜ್ಯದ ಅಭಿವೃದ್ಧಿ ಕಡೆ ಕೆಲಸ ಮಾಡಬೇಕು. ಇನ್ನು ಅಂಬರೀಷ್ ಸ್ಮಾರಕ ನಿರ್ಮಾಣದಲ್ಲಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಅದರ ಬಗ್ಗೆ ನನಗೆ ಸಮಾಧಾನ, ತೃಪ್ತಿ ಇದೆ ಎಂದು ಯಡಿಯೂರಪ್ಪ ಹೇಳಿದರು.
ಕಲಬುರಗಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಿದ್ದು, ಈ ವೇಳೆ ಪ್ರವಾಹದ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳೂ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸೂಚಿಸಿದ್ದೇನೆ ಎಂದ ಅವರು, ಕೊರೊನಾ ಹೆಚ್ಚಾಗಿರುವ ಕಾರಣ ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸುವ ನಿರ್ಧಾರ ಸದ್ಯಕ್ಕಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.