ಪಿರಿಯಾಪಟ್ಟಣ: ತಾಲೂಕಿನ ಅಬ್ಬಳತಿ ಗ್ರಾಮದ ಹೊರವಲಯದಲ್ಲಿ ವಾಸವಿದ್ದ ವಯೋವೃದ್ಧರನ್ನು ದುಷ್ಕರ್ಮಿಗಳು ಮನೆಗೆ ನುಗ್ಗಿ ಬಾಯಿಗೆ ಬಟ್ಟೆತುರುಕಿ ಕೈಕಾಲು ಕಟ್ಟಿಹಾಕಿ ಒಡವೆ ಮತ್ತು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಬುಧವಾರ ರಾತ್ರಿ ಜರುಗಿದೆ.
ಗೋಪಿ ಮೋಹನ್ (70) ಪತ್ನಿ ಮಣಿ (63) ಎಂಬುವವರೆ ಹಲ್ಲೆಗೊಳಗಾಗಿ ಹಣ ಒಡವೆ ಕಳೆದುಕೊಂಡ ವಯೋವೃದ್ದ ದಂಪತಿಗಳು, ಇವರು ಸುಮಾರು 48 ವರ್ಷಗಳಿಂದ ಅಬ್ಬಳತಿ ಕಾಫೀ ಎಸ್ಟೇಟ್ ನಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದು ಮಗ ಬೆಂಗಳೂರಿನಲ್ಲಿ ಹಾಗೂ ಮಗಳು ಕೇರಳದಲ್ಲಿ ವಾಸವಿದ್ದಾರೆ.
ಈ ವೃದ್ಧ ದಂಪತಿ ಕಳೆದ ನಾಲ್ಕು ತಿಂಗಳಿನಿಂದ ಕೋವಿಡ್ ಕಾರಣ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದರು. ಬುಧವಾರ ರಾತ್ರಿ 10ರ ಸಮಯದಲ್ಲಿ ಮನೆಯಲ್ಲಿ ಇವರು ಟಿವಿ ನೋಡುತ್ತ ಕುಳಿತ್ತಿದ್ದರು.
ಈತನ ಹೆಂಡತಿಗೆ ಅನಾರೋಗ್ಯವಿದ್ದ ಕಾರಣ ರೂಂ ನಲ್ಲಿ ಮಲಗಿರುವ ಸಮಯದಲ್ಲಿ ಮನೆಯ ಹಿಂಭಾಗ ಕಟ್ಟಿಹಾಕಿದ್ದ ನಾಯಿ ಇದ್ದಕ್ಕಿದ್ದ ಹಾಗೆ ಬೊಗಳುತ್ತಿರುವುದನ್ನು ಗಮನಿಸಿ ಬಾಗಿಲು ತೆಗೆದು ಬಗ್ಗಿ ನೋಡಿದ ಕೂಡಲೇ 4 ಜನ ಅಪರಿಚಿತ ವ್ಯಕ್ತಿಗಳು ನನ್ನನ್ನು ತಳ್ಳಿಕೊಂಡು ಒಳನುಗ್ಗಿ, ನನ್ನನ್ನು ತಬ್ಬಿ ಹಿಡಿದು ಬಾಯಿಗೆ ಪ್ಲಾಸ್ಟಿಕ್ ಅಂಟಿಸಿ ಅದು ಅಂಟದಿದ್ದಾಗ ಬಟ್ಟೆ ತುರುಕಿ ಕೈಕಾಲು ಕಟ್ಟಿಹಾಕಿ ಲಾಂಗ್ ಮತ್ತು ಚಾಕುಗಳನ್ನು ತೋರಿಸಿದರು.
ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡುತ್ತ ಹೆದರಿಸಿ ಮೈಮೇಲಿದ್ದ ಒಡವೆ ಕೊಡುವಂತೆ ಬೆದರಿಕೆ ಒಡ್ಡುತ್ತ ಕತ್ತಿನಲ್ಲಿದ್ದ 31 ಗ್ರಾಂ ಚಿನ್ನದ ಚೈನ್ ಕಿತ್ತುಕೊಂಡು, ಬಲಗೈಲಿದ್ದ 06 ಗ್ರಾಂ ತೂಕದ ಉಂಗುರ, ಹೆಂಡತಿಯ ಕಿವಿಯಲ್ಲಿದ್ದ 04 ಗ್ರಾಂ ಓಲೆ, ಪರ್ಸಿನಲ್ಲಿದ್ದ 4 ನಾಲ್ಕು ಸಾವಿರ ನಗದು ಹಣ, ಮೂರು ಮೊಬೈಲ್, 4 ವಾಚ್ ಗಳನ್ನು ತೆಗೆದುಕೊಂಡು ಬೀರುವನ್ನೆಲ್ಲ ತಡಕಾಡಿ ಬಟ್ಟೆಗಳನ್ನೆಲ್ಲ ಚಲ್ಲಾಪಿಲ್ಲಿ ಮಾಡಿ ಬೇರೇನು ಸಿಗದಿದ್ದಾಗ ಹಿಂಬಾಗಿಲ ಮೂಲಕವೇ ಪರಾರಿಯಾಗಿದ್ದಾರೆ.
ವಿಷಯ ತಿಳಿದ ಎಸ್ಪಿ ಆರ್.ಚೇತನ್, ಎಎಸ್ಪಿ ಶಿವಕುಮಾರ್, ಡಿವೈಎಸ್ಪಿ ಯೋಗಿಂದ್ರನಾಥ್, ಸಿಪಿಐ ಜಗದೀಶ್, ಪಿಎಸ್ಐ ಸದಾಶಿವ ತಿಪ್ಪಾರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.