ಬೆಂಗಳೂರು: ತಮ್ಮನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಹಾಗೂ ನಗರ ಸಾರಿಗೆ ಸಂಸ್ಥೆಗಳ ನೌಕರರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಗಳೂರಿನ ಬನಶಂಕರಿ ಬಸ್ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಹಾಗೂ ನಗರ ರಸ್ತೆ ಸಾರಿಗೆ ಸಂಸ್ಥೆ ನೌಕರರ ಪರವಾಗಿ ಕಾಂಗ್ರೆಸ್ ನಿಲ್ಲಲಿದೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಎಲ್ಲೆಲ್ಲಿ ನೀವು ಮುಷ್ಕರ ಮಾಡುತ್ತಿದ್ದೀರೋ ಅಲ್ಲೆಲ್ಲ ಪಕ್ಷ ನಿಮ್ಮ ಪರವಾಗಿದೆ ಎಂದು ಹೇಳಲು ಸಾಂಕೇತಿಕವಾಗಿ ಇಲ್ಲಿಗೆ ಬಂದಿದ್ದೇನೆ. ಕಾಂಗ್ರೆಸ್ ಕೂಡ ಸರ್ಕಾರಿ ನಡೆಸಿದೆ. ಸಾಕಷ್ಟು ಬದಲಾವಣೆ ತರಲು ಪ್ರಯತ್ನಿಸಿದೆ. ನೀವು ಹಗಲು-ರಾತ್ರಿ ಜನರ ಸೇವೆಗೆ ಶ್ರಮಿಸುತ್ತಿದ್ದೀರಿ. ನಿಮ್ಮ ಒತ್ತಡ ಏನು ಎಂಬುದರ ಬಗ್ಗೆ ಅರಿವಿದೆ. ಕೊರೊನಾ ಸಮಯದಲ್ಲಿ ತಾವು ಪಟ್ಟ ಶ್ರಮ, ಮಾಡಿದ ತ್ಯಾಗವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂದು ನಿಮ್ಮ ನೋವನ್ನು ವ್ಯಕ್ತಪಡಿಸಿದ್ದೀರಿ. ನಿಮ್ಮ ನೋವಿಗೆ ಮಂತ್ರಿಗಳು ಸ್ಪಂದಿಸಿಲ್ಲ. ಮುಖ್ಯಮಂತ್ರಿಗಳು ಕೇಳುತ್ತಿಲ್ಲ. ಸರ್ಕಾರದ ಪರವಾಗಿ ಶಾಸಕರೂ ಬಂದಿಲ್ಲ. ಅವರು ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ. ನಾನು ಇಂಧನ ಮಂತ್ರಿಯಾಗಿದ್ದಾಗ ಕೆಇಬಿಯವರಿಗೆ ವೇತನ ಭತ್ಯೆ ಹೆಚ್ಚಿಸಲಾಗಿತ್ತು. ಕೆಇಬಿ ಬೋರ್ಡ್‌ನಲ್ಲಿ ಲೈನ್‌ಮೆನ್ ಹಾಗೂ ಇಂಜಿನಿಯರ್‌ಗಳ ಪರವಾಗಿ ಇಬ್ಬರು ಪ್ರತಿನಿಧಿಗಳು ಇರುತ್ತಾರೆ ಎಂದು ಹೇಳಿದರು.
ಸರ್ಕಾರದ ಎಲ್ಲ ಶಾಸಕರಿಗೆ, ಮಂತ್ರಿಗಳಿಗೆ ನಿಮ್ಮ ಪರವಾಗಿ ಮನವಿ ಮಾಡುತ್ತೇನೆ. 1.35 ಲಕ್ಷ ಸಾರಿಗೆ ನೌಕರರು ಇದ್ದಾರೆ. ಕೋಟ್ಯಂತರ ಜನರಿಗೆ ಸೇವೆ ನೀಡುತ್ತಿದ್ದಾರೆ. ಅವರಿಗೆ ರಕ್ಷಣೆ ನೀಡಬೇಕು ಎಂದು ತಿಳಿಸಿದರು.