ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ : ಕುಟಿಲತೆಗೆ ಹೆಸರಾದ ಜೆಡಿಎಸ್ ಪಕ್ಷ ಪಿರಿಯಾಪಟ್ಟಣ ತಾಲೂಕಿನಲ್ಲಿ ನೀಚ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೆದರಿಸಿ, ಬೆದರಿಸಿ ಕಿರುಕುಳ ನೀಡಿ ಪಕ್ಷಾಂತರ ಮಾಡಿಸಲಾಗಿದೆ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ಆರೋಪಿಸಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆವರ್ತಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದರು.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು 350ಕ್ಕೂ ಹೆಚ್ಚು ಸದಸ್ಯರು ಜಯಗಳಿಸುವ ಮೂಲಕ ತಾಲೂಕಿನ 34 ಪಂಚಾಯಿತಿಗಳ ಪೈಕಿ 23 ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯುವ ಮುನ್ಸೂಚನೆ ಇತ್ತು. ಆದರೆ ಜೆಡಿಎಸ್ ಪಕ್ಷದವರ ಕುಟಿಲತೆಯಿಂದ ನಮ್ಮ ಸದಸ್ಯರನ್ನು ಹೆದರಿಸಿ ಬೆದರಿಸಿ, ಆಮೀಷ ತೋರಿಸಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಕೆಲಸ ಮಾಡಿದ್ದರೂ ನಾವು ತಾಲೂಕಿನಲ್ಲಿ ಜೆಡಿಎಸ್ ನವರಿಗಿಂತ ಹೆಚ್ಚು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ.
ಇರುವ 34 ಪಂಚಾಯಿತಿಗಳ ಪೈಕಿ 18 ಪಂಚಾಯಿತಿಗಲ್ಲಿ ಅಧಿಕಾರ ಹಿಡಿದು ಜೆಡಿಎಸ್ ನವರಿಗಿಂತ 2 ಪಂಚಾಯಿತಿ ಮುಂದಿದ್ದೇವೆ. ನಮ್ಮ ಸದಸ್ಯರನ್ನು ಅವರು ಸೆಳೆಯದಿದ್ದರೆ 3-4 ಪಂಚಾಯಿತಿಗಳಲ್ಲಿ ಮುಂದಿರುತ್ತಿದ್ದೆವು. ಇದಕ್ಕೆ ಇವರ ನೀಚರಾಜಕೀಯವೆ ಸಾಕ್ಷಿ. ಪಕ್ಷಕ್ಕೆ ಬಾರದಿದ್ದರೆ ತೊಂದರೆ ನೀಡಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡಿದ್ದಾರೆ. 35 ವರ್ಷಗಳಿಂದ ಕಾಣದ ರಾಜಕೀಯ ಮಾಡಿರುವ ನಾನು ಎಂದೆಂದೂ ಇಂತ ನೀಚರಾಜಕಾರಣ ನಾಡಿಲ್ಲ ಎಂದರು.
ಈ ಸಂದರ್ಭದಲ್ಲಿ ತಾಲೂಕು ಭೋವಿ ಸಮಾಜದ ಅಧ್ಯಕ್ಷ ರವಿಕುಮಾರ್ ಮಾತನಾಡಿ ಪಿರಿಯಾಪಟ್ಟಣ ತಾಲೂಕಿನ 34 ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭೋವಿ ಸಮಾಜದ ಅನೇಕರು ಗೆಲುವು ಸಾಧಿಸದ್ದರೂ ವಿರೋಧ ಪಕ್ಷದವರು ನಮ್ಮ ಸಮಾಜಕ್ಕೆ ಆಧ್ಯತೆ ನೀಡಲಿಲ್ಲ. ಆದರೆ ಸಮಾಜಿಕ ನ್ಯಾಯದ ಮೇಲೆ ಸ್ಥಾಪಿತವಾಗಿರುವ ಕಾಂಗ್ರೆಸ್ ಪಕ್ಷ ನಮ್ಮ ಸಮಾಜಕ್ಕೆ ಆವರ್ತಿ ಪಂಚಾಯತಿಯಲ್ಲಿ ಅವಕಾಶ ಮಾಡಿಕೊಟ್ಟಿದೆ ಇದಕ್ಕೆ ಕಾರಣರಾದ ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಪಂಚಾಯಿತಿ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.
ಆವರ್ತಿ ಗ್ರಾಮಪಂಚಾಯಿತಿ ಅಧ್ಯಕ್ಷ ಎಂ.ಕೆ.ಶಿವು ಮಾತನಾಡಿ, ಮಾಜಿ ಶಾಸಕರು ಹಿಂದಿನ ಅಧಿಕಾರ ಅವಧಿಯಲ್ಲಿ ನಮ್ಮ ಗ್ರಾಮ ಮರಡಿಯೂರು ಗ್ರಾಮಕ್ಕೆ 1.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ನಮ್ಮ ಗ್ರಾಮದ ಅಭಿವೃದ್ದಿ ಮಾಡಿದ್ದರು ಇದರ ಅಭಿಮಾನದ ಮೇಲೆ ಗ್ರಾಮಸ್ಥರು ನನ್ನನ್ನು ಬೆಂಬಲಿಸಿದ್ದಾರೆ ಎಂದರು.
ನೂತನ ಅಧ್ಯಕ್ಷ ಎಂ.ಕೆ.ಶಿವು ಉಪಾಧ್ಯಕ್ಷೆ ವಿದ್ಯಾಶ್ರೀ ಧರ್ಮ ಸದಸ್ಯ ಮುತ್ತಿನಮುಳಸೋಗೆ ಶಿವಕುಮಾರ್ ಅವರನ್ನು ಮಾಜಿ ಶಾಸಕ ಕೆ.ವೆಂಕಟೇಶ್ ಸನ್ಮಾನಿಸಿದರು. ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ, ಮುಖಂಡರಾದ ಬಿ.ಜೆ.ಬಸವರಾಜು, ಲಕ್ಷ್ಮೇಗೌಡ, ಚಂದ್ರಶೇಖರ್, ಪಿ.ಎನ್.ಚಂದ್ರಶೇಖರ್, ಭುಜಂಗ, ಅನಿಲ್ ಕುಮಾರ್, ಮುತ್ತುರಾಜ್, ಶಿವರುದ್ರನಾಯಕ, ಧರ್ಮ, ಶಿವಪ್ಪ, ಅಲ್ಲಾಉದ್ದೀನ್ ಮತ್ತಿತರರು ಇದ್ದರು.