ಜೀವನಕ್ಕೆ ದವಸ ಧಾನ್ಯ ನಂಬಿದ್ದ ರೈತಾಪಿ ವರ್ಗಕ್ಕೆ ಫಲಪುಷ್ಪ ಬೆಳೆಸುವ ಕಾಂಚಾಣ ಮಾರ್ಗವನ್ನು ತೋರಿಸಿದ ಕೀರ್ತಿ ಡಾ. ಎಂ.ಎಚ್. ಮರೀಗೌಡ ಅವರದು. ದೇಶದ ನಕಾಶೆಯಲ್ಲಿ ‘ತೋಟಗಾರಿಕೆ ಬೀಡು’ ಎಂಬ ಖ್ಯಾತಿ ಕರ್ನಾಟಕಕ್ಕೆ ದೊರೆಯಲು ಕಾರಣಕರ್ತ ಎನ್ನುವ ಹೆಗ್ಗಳಿಕೆಯೂ ಅವರಿಗೇ ಸಲ್ಲಬೇಕು.
ಕರ್ನಾಟಕದುದ್ದಕ್ಕೂ ನೂರಾರು ತೋಟಗಾರಿಕಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ ಈ ಮಹಾನ್ ಸಾಧಕ, ಮಾರಗೌಡನಹಳ್ಳಿ ಹೊಂಬೇಗೌಡ ಮರೀಗೌಡರು .
ತಿರುಮಕೂಡಲು ನರಸೀಪುರ ತಾಲೂಕಿನ ಮಾರಗೌಡನಹಳ್ಳಿಯ ಹೊಂಬೇಗೌಡರ ಮಗನಾಗಿ 8ನೇ ಆಗಸ್ಟ್ 1916ರಲ್ಲಿ ಜನಿಸಿದ ಮರೀಗೌಡರು ಪ್ರಾಥಮಿಕ ಶಾಲೆ ಓದಿದ್ದು ಹತ್ತಿರದ ಬನ್ನೂರಿನಲ್ಲಿ. ವಿಜ್ಞಾನದಲ್ಲಿ ಪದವಿ ಗಳಿಸಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ.
ಸಸ್ಯ ವಿಜ್ಞಾನದಲ್ಲಿ ಪ್ರಾರಂಭಿಕ ಶಿಕ್ಷಣದ ನಂತರ, ಹೆಚ್ಚಿನ ಜ್ಞಾನಾರ್ಜನೆಗಾಗಿ ಲಖನೌ ಗೆ ತೆರಳಿ ಅಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 1942ರಲ್ಲಿ ತಮ್ಮ ವೃತ್ತಿಜೀವನವನ್ನು ಮೈಸೂರು ಸರ್ಕಾರದ ಸರ್ಕಾರಿ ಉದ್ಯಾನವನಗಳ ಇಲಾಖೆಗೆ ಸೂಪರಿಂಟೆಂಟ್ ಆಫ್ ಗಾರ್ಡನ್ಸ್ ಹುದ್ದೆಯಿಂದ ಆರಂಭಿಸಿದರು. ಅಲ್ಲಿ ಹಿರಿಯರಾದ ಜವರಾಯರ ಸಮರ್ಥ ಮಾರ್ಗದರ್ಶನದ ಲಾಭ ಸಿಕ್ಕಿತು. ತೋಟಗಾರಿಕೆಯಲ್ಲಿ ಉನ್ನತ ಶಿಕ್ಷಣ ಪಡೆಯಲು 1947ರಲ್ಲಿ, ಲಂಡನ್ ನ ಕ್ಯೂ ರಾಯಲ್ ಬಟಾನಿಕಲ್ ಗಾರ್ಡನ್ಸ್ ನಲ್ಲಿ ಸಸ್ಯೋದ್ಯಾನಗಳ ನಿರ್ವಹಣೆ ಮತ್ತು ಸುಂದರೀಕರಣದ ಬಗ್ಗೆ ಹೆಚ್ಚಿನ ಜ್ಞಾನವನ್ನು ಸಂಪಾದಿಸಿದರು. 1948 ರಲ್ಲಿ ಲಂಡನ್ ನಿಂದ ಅಮೆರಿಕಕ್ಕೆ PhD ವ್ಯಾಸಂಗಕ್ಕೆಂದು ತೆರಳಿದರು. ಹಾರ್ವರ್ಡ್ ವಿಶ್ವವಿದ್ಯಾಲಯದಿಂದ 1951 ರಲ್ಲಿ ಸಸ್ಯವಿಜ್ಞಾನದಲ್ಲಿ ಡಾಕ್ಟರೇಟ್ ಸಂಪಾದಿಸಿದರು. ಬಳಿಕ ಲಾಲ್‌ಬಾಗ್ ಸೂಪರಿಂಡೆಂಟ್ ಆಗಿ 1951ರಲ್ಲಿ ಅಧಿಕಾರ ಸ್ವೀಕರಿಸಿದರು.
ತೋಟಗಾರಿಕೆಯ ಹವ್ಯಾಸ,’ ಮೊದಲು, ಸ್ಥಿತಿವಂತರಿಗೆ ಮಾತ್ರ ಮೀಸಲಾಗಿತ್ತು ಮರೀಗೌಡರು ತಮ್ಮ ಚಿಕ್ಕವಯಸ್ಸಿನಲ್ಲಿ ಬಡರೈತರ ಕಡುಬಡತನವನ್ನು ಸಂಕಷ್ಟದ ಸ್ಥಿತಿಯನ್ನು ಕಂಡಿದ್ದರು. ಮುಂದೆ ಅಮೆರಿಕಕ್ಕೆ ಹೋದಾಗಲೂ, ಅಲ್ಲಿ ಅನೇಕ ಹುದ್ದೆಗಳು ಸಿಕ್ಕಾಗಲೂ ಇಷ್ಟಪಡದೆ, ಮತ್ತೆ ವಾಪಸ್ ಭಾರತಕ್ಕೆ ಮರಳಿದರು. ಹಳ್ಳಿಯ ಬಡರೈತರಿಗೆ ತಮ್ಮ ಕೈಲಾದ ಸಹಾಯವನ್ನು ಹೇಗಾದರೂ ಮಾಡಬೇಕೆಂಬುದು ಅವರ ಆಸೆಯಾಗಿತ್ತು. ಹಾಗೆ ವಾಪಸ್ಸಾದ ಮರೀಗೌಡರು ಬೆಂಗಳೂರಿನ ಲಾಲ್ ಬಾಗಿನಲ್ಲಿ ಹುದ್ದೆಯಲ್ಲಿ ಕಾರ್ಯೋನ್ಮುಖರಾದರು.
ತೋಟಗಾರಿಕೆ ಇಲಾಖೆಗೆ ಪ್ರತ್ಯೇಕ ಅಸ್ತಿತ್ವ ಇಲ್ಲದ ಆ ದಿನಗಳಲ್ಲಿ ‘ಉದ್ಯಾನ ಇಲಾಖೆ’ ಎಂಬ ಹೆಸರಿತ್ತು. ಬೆಂಗಳೂರಿನ ಲಾಲ್‌ಬಾಗ್ ಇದರ ಕೇಂದ್ರ ಸ್ಥಳ. ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತೋಟಗಾರಿಕಾ ಶಾಖೆ, ಸ್ವತಂತ್ರ ಇಲಾಖೆಯಾಗಿ ರೂಪುಗೊಂಡಿದ್ದು 1963ರಲ್ಲಿ. ಇದರ ಮೊದಲ ನಿರ್ದೇಶಕರು ಮರೀಗೌಡ. ‘ಉದ್ಯಾನ ಇಲಾಖೆ’ ವ್ಯಾಪ್ತಿಯಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್, ಕೆ.ಆರ್.ಎಸ್.ನ ಬೃಂದಾವನಗಳು ಮಾತ್ರವಿದ್ದವು. ಆನಂತರ ಇದಕ್ಕೆ ಸೇರ್ಪಡೆಗೊಂಡಿದ್ದು ಕೆಮ್ಮಣ್ಣು ಗುಂಡಿ ಹಾಗೂ ನಂದಿ ಬೆಟ್ಟ.
ಇವೆಲ್ಲ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದ ಮರೀಗೌಡರನ್ನು ಇಲಾಖೆಗೆ ಕಾಲಿಟ್ಟ ದಿನದಿಂದಲೂ ರೈತರ ಹಿತಚಿಂತನೆ ಕಾಡತೊಡಗಿತ್ತು. ಕೃಷಿ ಕುಟುಂಬದಲ್ಲಿ ಹುಟ್ಟಿ ಸಸ್ಯಶಾಸ್ತ್ರದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದ ಅವರು ಇಂಗ್ಲೆಂಡ್‌ನ ‘ಕ್ಯೂ ಉದ್ಯಾನ’ಕ್ಕೆ ತರಬೇತಿಗೆಂದು ಹೋದಾಗ ಆದ ಅನುಭವಗಳೆಲ್ಲವೂ ರೈತಪರ ದೃಷ್ಟಿಕೋನವನ್ನೇ ಹೊಂದಿದ್ದವು.
‘ಉದ್ಯಾನ ಶಾಖೆ’ಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೇ ಅಂದುಕೊಂಡಿದ್ದನ್ನು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ನಿರತರಾದ ಮರೀಗೌಡರು, ಕೇವಲ ಉದ್ಯಾನಗಳ ನಿರ್ವಹಣೆಗೆ ಸೀಮಿತವಾಗಿದ್ದ ಇಲಾಖೆಯನ್ನು ರೈತರ ಬಳಿಗೆ ಕೊಂಡೊಯ್ಯಲು ಮುಂದಾದರು. ರಾಗಿ, ಜೋಳ, ಭತ್ತದೊಂದಿಗೆ ಹಣ್ಣು–ತರಕಾರಿ ಸಹ ಗ್ರಾಮೀಣರ ಬದುಕಿಗೆ ಅನಿವಾರ್ಯ ಎನ್ನುವುದು ಮರೀಗೌಡರ ಮೊದಲ ಮಂತ್ರ. ಗ್ರಾಮಬದುಕಿಗೆ ಪೂರಕವಾಗಿ ತೋಟಗಾರಿಕೆ ನಡೆಯುವುದರಿಂದ ರೈತರ ಬದುಕನ್ನು ಹಸನುಗೊಳಿಸುವುದು ಅವರ ಗುರಿ.
ಹಳ್ಳಿಗಳತ್ತ ಹೆಜ್ಜೆ ಹಾಕಿದ ‘ಉದ್ಯಾನ ಇಲಾಖೆ’ ರೈತರಲ್ಲಿ ಹಣ್ಣು–ತರಕಾರಿ ಬೆಳೆಗಳ ಅರಿವು ಮೂಡಿಸಲು ಮುಂದಾಯಿತು. ನೋಡನೋಡುತ್ತಿದ್ದಂತೆ ರೈತರ ಮನೆ ಹಿತ್ತಲು–ಅಂಗಳಗಳಲ್ಲಿ ತರಕಾರಿ–ಹಣ್ಣು ಕಾಣತೊಡಗಿದವು. ಇಲಾಖೆಯು ಉಚಿತವಾಗಿ ಸಸಿಗಳನ್ನು ಸರಬರಾಜು ಮಾಡಿ, ಬೆಳೆಸುವ ವಿಧಾನಗಳನ್ನು ಹೇಳಿಕೊಡತೊಡಗಿತು. ಈ ಉಪಬೆಳೆಯನ್ನು ಸಂತೆಗಳಿಗೆ ಹೊತ್ತೊಯ್ದ ರೈತರ ಜೇಬಿಗೆ ಒಂದಿಷ್ಟು ಕಾಸು ಕೂಡಿತು.
ರಾಜ್ಯದುದ್ದಕ್ಕೂ ಅನೇಕ ಪಾಳುಬಿದ್ದ ಜಮೀನುಗಳು ಹಣ್ಣು ಹಂಪಲು ಬೆಳೆಯುವ ಕ್ಷೇತ್ರಗಳಾಗಿ ಬೆಳವಣಿಗೆ ಕಂಡವು. ರಾಜ್ಯದ 1800 ಎಕರೆಯಲ್ಲಿ 394 ತೋಟಗಾರಿಕಾ ಕ್ಷೇತ್ರಗಳನ್ನು ಕಟ್ಟಿಕೊಟ್ಟ ಹೆಗ್ಗಳಿಕೆ ಮರೀಗೌಡರದ್ದು! ಇದರಿಂದ ತಾಜಾ ಹಣ್ಣು – ತರಕಾರಿಗಳು ಕಡಿಮೆ ಬೆಲೆಯಲ್ಲಿ ಜನತೆಗೆ ಸಿಕ್ಕಿದರೆ, ಇಲಾಖೆಗೆ ಹೊಸತೊಂದು ಆದಾಯ ಮೂಲ ತೆರೆದುಕೊಂಡಿತು. ಕೃಷಿ ಚಮತ್ಕಾರಗಳನ್ನು ಎಡಬಿಡದೆ ಮಾಡುತ್ತಾ ಹೋದ ಮರೀಗೌಡರು ಜನರಲ್ಲಿ ಸಸ್ಯಪ್ರೀತಿಯನ್ನು ಬೆಳೆಸಿದರು.
ಅವರ ಪ್ರಯತ್ನದಿಂದಾಗಿ ಕೇಳರಿಯದ ಕುಗ್ರಾಮಗಳಲ್ಲೂ ತೋಟಗಾರಿಕಾ ಜಾಗೃತಿ ಕಂಡು ಬಂತು. ಯಾವ ಸಸ್ಯವೂ ನಿರುಪಯುಕ್ತವಲ್ಲ ಎಂಬುದನ್ನು ರೈತಾಪಿ ಜನರಿಗೆ ಮನದಟ್ಟು ಮಾಡಿಕೊಟ್ಟ ಅವರು, ರೈತರ ಮನೆ ಬಾಗಿಲಿಗೆ ಬೀಜ–ಸಸಿಗಳನ್ನು ತಲುಪಿಸಲು ಹಿಂದೆಮುಂದೆ ನೋಡಲಿಲ್ಲ.
ವಿದೇಶಗಳಲ್ಲಿ ಲಭ್ಯವಿದ್ದ ಹಣ್ಣು–ತರಕಾರಿಗಳನ್ನು ನಮ್ಮ ನೆಲದಲ್ಲಿ ಚಿಗುರೊಡೆಸಿದ ಕೀರ್ತಿ ಅವರದು. ಅವರು ತೋಟಗಾರರಿಗೆ ಮಾತ್ರ ಸಹಾಯ ಮಾಡಲಿಲ್ಲ, ಬಳಕೆದಾರರಿಗೆ ತಾಜಾ ಮಾಲು ಸಿಗುವಂತೆಯೂ ಮಾಡಿದರು. ನಾಡಿನ ಬೊಕ್ಕಸಕ್ಕೂ ಆದಾಯ ತಂದುಕೊಟ್ಟರು. ತೆಂಗು ತೋಪುಗಳು, ಪುಷ್ಪ ಕೃಷಿಯ ಬಯಲುಗಳು, ದ್ರಾಕ್ಷಿ ಹಂದರದ ತೋಟಗಳು, ತೋಟಗಾರರಿಗೆ ಪ್ರತ್ಯೇಕ ಸಹಕಾರ ಸಂಘಗಳು ಇವೆಲ್ಲ ಮರಿಗೌಡರ ಪ್ರಯೋಗಶೀಲತೆಯ ಫಲಿತಾಂಶಗಳೇ ಆಗಿವೆ.
ಬೆಂಗಳೂರಿನ ಕೆಂಪುತೋಟದಲ್ಲಿ ಸಸ್ಯಕ್ಷೇತ್ರವನ್ನು ಅಚ್ಚುಕಟ್ಟಾಗಿ ಅಭಿವೃದ್ಧಿಪಡಿಸಲು ಮರೀಗೌಡರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಹಳ್ಳಿಯ ರೈತರು ಬಿತ್ತನೆ ಬೀಜ–ಸಸಿಗಳಿಗಾಗಿ ಯಾವಾಗಲೂ ಲಾಲ್‌ಬಾಗ್‌ಗೆ ಬರುವುದು ಸರಿಯಲ್ಲವೆಂಬ ತೀರ್ಮಾನಕ್ಕೆ ಬಂದವರೇ – ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ತೋಟಗಾರಿಕಾ ಕ್ಷೇತ್ರಗಳನ್ನು ಸ್ಥಾಪಿಸುವ ಅಗಾಧವಾದ ಕಾರ್ಯವನ್ನು ಅಡೆತಡೆಗಳ ನಡುವೆಯೂ ಸಾಧಿಸಿ ತೋರಿಸಿದರು.
ಬೆರಳೆಣಿಕೆಯಷ್ಟು ಉದ್ಯಾನಗಳಿಗೆ ಸೀಮಿತವಾಗದ್ದ ಇಲಾಖೆಯನ್ನು ಬೇರುಮಟ್ಟಕ್ಕೆ ತಲುಪಿಸಿದ ಮರೀಗೌಡರು ಕಚೇರಿಗಳಿಗೆ – ಮೇಜುಗಳಿಗೆ ಅಂಟಿಕೊಳ್ಳುವ ಜಾಯಮಾನದವರಾಗಿರಲಿಲ್ಲ.
ಹಣ್ಣು ಮತ್ತು ತರಕಾರಿ ನಿರ್ದಿಷ್ಟ ಭೌಗೋಳಿಕ ಪರಿಸರಕ್ಕೆ ಮಾತ್ರ ಸೀಮಿತ ಎಂಬುದನ್ನು ಮರೀಗೌಡರು ನಂಬುತ್ತಿರಲಿಲ್ಲ. ಮಲೆನಾಡಿನಲ್ಲಿ ಮಾತ್ರ ಕಾಫಿ ಬೆಳೆಯುತ್ತದೆ ಎಂಬುದನ್ನು ಸುಳ್ಳು ಮಾಡಲು ಬಯಲುಸೀಮೆಯಲ್ಲೂ ಕಾಫಿ ಬೆಳೆಯನ್ನು ಯಶಸ್ವಿಯಾಗಿ ನಡೆಸುವ ಪ್ರಯತ್ನಗಳಿಗೆ ಉತ್ತೇಜನ ಕೊಟ್ಟರು ಹಾಗೂ ಈ ಪ್ರಯತ್ನಗಳಲ್ಲಿ ಯಶಕಂಡರು. ತೆಂಗು ಕರಾವಳಿಗೆ ಸೀಮತವಲ್ಲ ಎಂದ ಅವರು ಮೈಸೂರು, ಕೋಲಾರಗಳಿಗೂ ತೆಂಗನ್ನು ಹರಡಿದರು.
ತೋಟಗಾರರನ್ನು ಹುರಿದುಂಬಿಸಲು ಹಲವು ಪ್ರಾತ್ಯಕ್ಷಿಕೆಗಳನ್ನು ನಿರಂತರವಾಗಿ ಏರ್ಪಡಿಸುವುದು ಮರಿಗೌಡರಿಗೆ ಬಹು ಇಷ್ಟದ ಕೆಲಸವಾಗಿತ್ತು. ಕೆಲವು ಪ್ರದೇಶಗಳಲ್ಲಿ ನಿರ್ದಿಷ್ಟ ಬೆಳೆಗೆ ಸಂಬಂಧಿಸಿದ ಸಸ್ಯಕ್ಷೇತ್ರಗಳು ಶುರುವಾಗಲೂ ಕೂಡ ಇವರೇ ಕಾರಣ. ಶುರುವಿಗೆ ದ್ರಾಕ್ಷಿ ಬೆಳೆಯ ಮೇಲೆ ಪೂರ್ಣ ದೃಷ್ಟಿ ಹರಿಸಿದ ಅವರು, ದ್ರಾಕ್ಷಿಯಲ್ಲಿ ಆಗ ಲಭ್ಯವಿದ್ದ ಮೂರು ತಳಿಗಳನ್ನು ಸಂಗ್ರಹಿಸಿದರು. ದ್ರಾಕ್ಷಿಗೆ ಮಾರುಕಟ್ಟೆ ಒದಗಿಸಲು ‘ಸಹಕಾರಿ ಸಂಘ ಮಾರಾಟ ಮಳಿಗೆ’ಗಳನ್ನು ರೂಪಿಸಿದರು.
ಹಲಸು ಈಗ ವಿಶ್ವವ್ಯಾಪಿ ಬೇಡಿಕೆ ಇರುವ ಹಣ್ಣು. ಮರೀಗೌಡರ ದೂರದೃಷ್ಟಿಯ ಫಲವಾಗಿ, ಕೋಲಾರ ಸಮೀಪದ ತಮಕ ಗ್ರಾಮದಲ್ಲಿ ಇಡೀ ದೇಶದಲ್ಲಿ ಸಿಗುವ ಹಲಸು ತಳಿಗಳನ್ನು ಒಂದೆಡೆ ಒಟ್ಟು ಮಾಡಲಾಯಿತು. ತಮಕದ ನೆಲದಲ್ಲಿ ಹಲಸಿನ ಹತ್ತಾರು ಬಗೆಯ ಹೊಸತಳಿಗಳು ಹೊರಹೊಮ್ಮಲು ಮರೀಗೌಡರು ಕಾರಣ.
ಒಣ ಭೂಮಿ ಬೇಸಾಯಕ್ಕೆ ಒತ್ತು ಕೊಡಲಾರಂಭಿಸಿದ ಅವರು, ಒಣಬೆಳೆ ಅಭಿವೃದ್ಧಿಯಿಂದ ಸಣ್ಣ ಹಿಡುವಳಿದಾರರಿಗೆ ಹೆಚ್ಚಿನ ಆದಾಯ ಸಿಗುವುದೆಂಬುದನ್ನು ತೋರಿಸಿಕೊಡಲು ರಾಜ್ಯದ ತುಂಬಾ ಒಣ ಬೇಸಾಯ ಕ್ಷೇತ್ರಗಳನ್ನು ತಲೆ ಎತ್ತುವಂತೆ ಮಾಡಿದರು. ಇಂತಹ ಕ್ಷೇತ್ರಗಳಲ್ಲಿ ಪ್ರಯೋಗಗಳಿಗೆ, ತರಬೇತಿಗಳಿಗೆ, ತೋಟಗಾರರ ತರಬೇತಿ ಸಲಹೆಗಳಿಗೆ ಅವಕಾಶ ಮಾಡಿಕೊಟ್ಟರು. ತೋಟಗಾರಿಕೆಗೆ ಬುನಾದಿ ಹಾಕಿಕೊಟ್ಟ ಈ ಕ್ಷೇತ್ರಗಳು ನಾಲ್ಕೈದು ದಶಕಗಳ ನಂತರವೂ ಜನಪ್ರಿಯ ಕ್ಷೇತ್ರಗಳಾಗಿ ಉಳಿದಿವೆ.
ಚಾಮರಾಜನಗರದ ಬಾಗಲಿ, ಕೋಲಾರ, ಶ್ರೀನಿವಾಸಪುರದ ಹೊಗಳಗೆರೆ, ಕೊರಟಗೆರೆಯ ದೊಡ್ಡಸಗ್ಗರೆ, ಮಂಡ್ಯ ಜಿಲ್ಲೆಯ ಮಲ್ಲಸಂದ್ರ ಇಂತಹ ಕ್ಷೇತ್ರಗಳಿಗೆ ಕೆಲವು ನಿದರ್ಶನಗಳು.
ಪಶ್ಚಿಮ ಘಟ್ಟಗಳಲ್ಲಿ ಕೋಕೋ ಬೆಳೆಗೆ ನಾಂದಿ ಹಾಡಿದ್ದು ಮರೀಗೌಡರ ಮತ್ತೊಂದು ಸಾಧನೆ. ಅದಕ್ಕೆಂದೇ ಚಾರ್ಮುಡಿಯಲ್ಲಿ ಒಂದು ಕ್ಷೇತ್ರವನ್ನು ಆರಂಭಿಸಿದ ಅವರು, ಕಡಲತಟದಲ್ಲಿದ್ದ ಗೋಡಂಬಿಯನ್ನು ಬಯಲು ಸೀಮೆಗೆ ತಂದರು. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಸಸ್ಯಕ್ಷೇತ್ರಗಳನ್ನು ಶುರು ಮಾಡಿ, ನರ್ಸರಿಗಳನ್ನು ತೆರೆದು, ರೈತರಿಗೆ ಬೀಜ–ಸಸಿ ಸಿಗುವಂತೆ ಮಾಡಿದರು.
ತೋಟಗಾರರಿಗೆ ಅಗತ್ಯವಾದ ಬೀಜ–ಸಸಿಯನ್ನು ಸರ್ಕಾರದ ಸಸ್ಯಕ್ಷೇತ್ರಗಳಿಂದಲೇ ಪೂರೈಸಲು ಅಸಾಧ್ಯವೆಂಬುದನ್ನು ಅರಿತ ಮರಿಗೌಡರು ಉತ್ತಮ ಖಾಸಗಿ ಸಂಸ್ಥೆಗಳಿಗೂ ಪ್ರೋತ್ಸಾಹ ನೀಡಿದರು. ಇದರಿಂದಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ‘ಇಂಡೋ – ಅಮೆರಿಕನ್ ಹೈಬ್ರಿಡ್ ಸೀಡ್ಸ್’ನಂತಹ ಸಂಸ್ಥೆ ನೆಲೆ ನಿಲ್ಲಲು ಸಾಧ್ಯವಾಯಿತು.
ಬೆಂಗಳೂರಿನ ಬೃಹತ್ ಶ್ವಾಸಕೋಶ ಲಾಲ್‌ಬಾಗ್ ಬಹುಬಗೆಯಿಂದ ಅಭಿವೃದ್ಧಿಗೊಳ್ಳಲು ಮರೀಗೌಡರ ಶ್ರಮ ಉಲ್ಲೇಖನೀಯ. ನೂರು ಎಕರೆಗಳಷ್ಟಿರುವ ಕೆಂಪುತೋಟವನ್ನು 240 ಎಕರೆಗಳಿಗೆ ಹಬ್ಬಿಸಲು ಅವರು ಮುಖ್ಯಕಾರಣ. ಉದ್ಯಾನವಾಗಿ ಖ್ಯಾತಿಪಡೆದ ಲಾಲ್‌ಬಾಗ್ ಅನ್ನು ತೋಟಗಾರರ ಸಮೂಹಕ್ಕೂ ಗಮನ ಸೆಳೆಯುವಂತೆ ಮಾಡಿದ ಅವರು, ಫಲಪುಷ್ಪ ಪ್ರದರ್ಶನಗಳಿಗೆ ಮೆರುಗು ತಂದರು. ‘ಸಸ್ಯ ಸಂತೆ’ಗಳನ್ನು ಸಂಘಟಿಸಿದರು.
ಸಹಕಾರಿ ತತ್ವದ ಆಧಾರದ ಮೇಲೆ ಹಾಪ್‌ಕಾಮ್ಸ್‌ನಂತಹ ನಿತ್ಯೋಪಯೋಗಿ ಪದಾರ್ಥಗಳ ಮಾರುವ ಮಾರಾಟ ಜಾಲವನ್ನು ನಾಡಿನೆಲ್ಲೆಡೆ ಹರಡಲು ನಾಂದಿ ಹಾಡಿದ್ದು ಅವರೇ.
ಶಾಲಾ ದಿನಗಳಲ್ಲಿಯೇ ಕವಿ ಕುವೆಂಪು ಅವರ ಒಡನಾಟ ಹೊಂದಿದ್ದ ಮರೀಗೌಡರು, ತೋಟಗಾರಿಕಾ ವಲಯದಲ್ಲಿ ಮಾಡಿದ ಸಾಧನೆಯನ್ನು ಕುವೆಂಪು ತಮ್ಮ ಜೀವನ ವೃತ್ತಾಂತ ‘ನೆನಪಿನ ದೋಣಿ’ಯಲ್ಲಿ ಉಲ್ಲೇಖಿಸಿರುವುದು ಮಾತ್ರವಲ್ಲ; ‘ದೇವಾಲಯವೀ ಹೂವಿನ ತೋಟಂ’ – ‘ಕೈಮುಗಿದು ಒಳಗೆ ಬಾ ಇದು ಸಸ್ಯಕಾಶಿ’ ರೀತಿಯ ಅರ್ಥಪೂರ್ಣ ಧ್ಯೇಯವಾಕ್ಯಗಳನ್ನು ಲಾಲ್‌ಬಾಗ್‌ಗಾಗಿ ರಚಿಸಿಕೊಟ್ಟದ್ದಾರೆ.
ಒಳ್ಳೆಯ ಮಾತುಗಾರರಾಗಿ ರೈತಾಪಿ ಜನರ ಮನ ತಲುಪಿದ ಮರೀಗೌಡರು ಅನುಭವದಿಂದಲೇ ಹಲವು ಕೃತಿಗಳನ್ನು ಬರೆದು ಓದುಗರನ್ನು ಮುಟ್ಟಿದ್ದಾರೆ. ಕಾನೂನು ಕಾಯ್ದೆಗಳಿಗೆ ಕಾಯದೆ, ರೈತರ ಹಿತಾಸಕ್ತಿಗೆ ಸ್ಪಂದಿಸಿದ ಡಾ. ಎಂ.ಎಚ್. ಮರೀಗೌಡರಿಗೆ ನಮ್ಮಯ ನಮನಗಳು…