CrimeNEWSನಮ್ಮರಾಜ್ಯ

ಅಗ್ನಿ ಅವಘಡ : ಬ್ಯಾಟರೀಸ್‌ ಕಾರ್ಖಾನೆ ಭಸ್ಮ, ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ನಾಶ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಕನಕಪುರ: ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಶಕ್ತಿ ಬ್ಯಾಟರೀಸ್‌ ಕಾರ್ಖಾನೆಯಲ್ಲಿ ಮಂಗಳವಾರ ಸಂಜೆ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಸಂಜೆ 5.30ರ ಸುಮಾರಿಗೆ ಕಾರ್ಮಿಕರೆಲ್ಲರೂ ಕಾರ್ಖಾನೆಯಿಂದ ಹೊರಡುವ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕ್ರಮೇಣ ಸುತ್ತಲಿನ ಪ್ರದೇಶಕ್ಕೆ ವ್ಯಾಪಿಸಿ ಹೊತ್ತಿ ಉರಿಯಿತು. ಬೆಂಕಿ ಕಾಣಿಸಿಕೊಳ್ಳುತ್ತಲೇ ಅಲ್ಲಿನ ಸಿಬ್ಬಂದಿ ಹೊರಗೆ ಓಡಿ ಬಂದರು.

ದೊಡ್ಡ ಪ್ರಮಾಣದಲ್ಲಿ ಜ್ವಾಲೆಗಳು ಎದ್ದಿದ್ದು, ದಟ್ಟ ಹೊಗೆ ಇಡೀ ಕೈಗಾರಿಕಾ ಪ್ರದೇಶವನ್ನು ಆವರಿಸಿತ್ತು. ವಿಷಯ ತಿಳಿದ ಕೂಡಲೇ 20 ಅಗ್ನಿಶಾಮಕ ವಾಹನಗಳೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ನಿರತರಾಗಿದ್ದರು. ಅಕ್ಕಪಕ್ಕದ ಕಾರ್ಖಾನೆಗಳಿಗೆ ಬೆಂಕಿ ಹರಡುವ ಆತಂಕ ಇದ್ದು, ಬೆಂಕಿ ಹರಡದಂತೆ ಸಿಬ್ಬಂದಿ ನಿಯಂತ್ರಿಸಿದರು.

ಬೆಂಕಿಯ ಶಾಖಕ್ಕೆ ಕಾರ್ಖಾನೆಯಲ್ಲಿನ ಸಿಲಿಂಡರ್ ಸ್ಫೋಟಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸಾಹಸದಿಂದ ಒಳ ಪ್ರವೇಶಿಸಿ, ಉಳಿದ ಎರಡು ಸಿಲಿಂಡರ್‌ಗಳು ಸ್ಫೋಟಿಸದಂತೆ ತಡೆದು ಹೊರ ತಂದರು ಎನ್ನಲಾಗಿದೆ.

ಪ್ರಸ್ತುತ 120 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಸಂಜೆ 4.30ರವರೆಗೂ ಮಾಲೀಕ ನಾಗರಾಜು ಕಾರ್ಖಾನೆಯಲ್ಲೇ ಇದ್ದು, ನಂತರದಲ್ಲಿ ಮನೆಗೆ ತೆರಳಿದ್ದರು. ಕಾರ್ಮಿಕರು ಕೆಲಸ ಮುಗಿಸಿ ಹೊರಡುವ ಸಿದ್ಧತೆಯಲ್ಲಿ ಇದ್ದಾಗ ಈ ಅವಘಡ ಸಂಭವಿಸಿದೆ. ಕಾರ್ಮಿಕರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ. ಅಪಾರ ಪ್ರಮಾಣದ ಬ್ಯಾಟರಿಗಳು ಹಾಗೂ ಯಂತ್ರೋಪಕರಣಗಳು ಬೆಂಕಿಗೆ ಹಾನಿಯಾಗಿವೆ.

ಕತ್ತಲಿನ ಕಾರಣ ಕಾರ್ಯಾಚರಣೆಗೆ ತೊಡಕಾಗಿದ್ದು, ಬೆಂಕಿ ನಂದಿಸುವ ಕಾರ್ಯಮುಂದುವರಿದಿತ್ತು. ಪಕ್ಕದಲ್ಲೇ ಔಷಧ ತಯಾರಿಕಾ ಕಾರ್ಖಾನೆಯೂ ಇದ್ದು, ಅಲ್ಲಿನ ಸಿಬ್ಬಂದಿಯೂ ಆತಂಕಕ್ಕೆ ಒಳಗಾಗಿದ್ದರು. ಕಾರ್ಖಾನೆಯು ಹಾರೋಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ನಾಗರಾಜು ಅವರಿಗೆ ಸೇರಿದ್ದಾಗಿದೆ. 2015ರಲ್ಲಿ ಇದು ಕಾರ್ಯಾರಂಭ ಮಾಡಿದ್ದು, ಇಲ್ಲಿ ಯುಪಿಎಸ್‌ ಬ್ಯಾಟರಿಗಳನ್ನು ಉತ್ಪಾದಿಸಲಾಗುತ್ತಿತ್ತು.

ಅಗ್ನಿಶಾಮಕ ಠಾಣೆಗೆ ಒತ್ತಾಯ
ಇತ್ತೀಚಿನ ದಿನಗಳಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸುತ್ತಿರುವ ಮೂರನೇ ಅಗ್ನಿ ಅವಘಡ ಇದಾಗಿದೆ. ಈ ಕೈಗಾರಿಕಾ ಪ್ರದೇಶವು ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ವಸಾಹತುಗಳಲ್ಲಿ ಒಂದಾಗಿದೆ. ಹೀಗಿದ್ದೂ ಇಲ್ಲಿ ಅಗ್ನಿಶಾಮಕ ಠಾಣೆ ಇಲ್ಲ. ಇಲ್ಲಿಯೇ ಬೆಂಕಿ ನಂದಿಸುವ ವಾಹನಗಳ ಸೇವೆ ಲಭ್ಯ ಇದ್ದಿದ್ದರೆ ಇನ್ನಷ್ಟು ಶೀಘ್ರವಾಗಿ ಬೆಂಕಿಯನ್ನು ನಂದಿಸಬಹುದಿತ್ತು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟರು.

ಕಾರ್ಖಾನೆಯಲ್ಲಿನ ಬೆಂಕಿ ನಂದಿಸುವ ಕಾರ್ಯವು ತಡರಾತ್ರಿವರೆಗೂ ಮುಂದುವರಿದಿತ್ತು. ವಿವಿಧ ಇಲಾಖೆಗಳು ಸೇರಿದಂತೆ ಸಾವಿರದಷ್ಟು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಭಾಗಿಯಾದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಮೇಶ್‌, ಸಿಎಫ್‌ಒ ಗುರುಲಿಂಗಯ್ಯ, ಬಿ.ಪಿ.ಡಿ. ರವಿಕುಮಾರ್, ಬಸವಣ್ಣ ಸೇರಿದಂತೆ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಡಿವೈಎಸ್ಪಿ ಪುರುಷೋತ್ತಮ್‌, ಸರ್ಕಲ್‌ ಇನ್‌ಸ್ಪೆಕ್ಟರ್ ಸತೀಶ್‌, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಮುರಳಿ, ಅನಂತರಾಮು ಇದ್ದರು.

Leave a Reply

error: Content is protected !!
LATEST
ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ