ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ಸಿಸಿಬಿ ಎಸಿಪಿ ವೇಣುಗೋಪಾಲ್ ನಗರದ ಫ್ರೇಜರ್ ಟೌನ್ನಲ್ಲಿರುವ ಸಂಪತ್ ರಾಜ್ ಮನೆಗೆ ತೆರಳಿ ನೋಟಿಸ್ ಅಂಟಿಸಿದ್ದಾರೆ.
ಡಿ.ಜೆ. ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿಸಿದ ಆರೋಪ ಎದುರಿಸುತ್ತಿರುವ ಸಂಪತ್ ರಾಜ್ ಮನೆಗೆ ಭಾನುವಾರ ಸಿಸಿಬಿ ಅಧಿಕಾರಿಗಳು ಭೇಟಿ ನೀಡಿದರು.
ಆ ವೇಳೆ ಅವರು ಮನೆಯಲ್ಲಿ ಇಲ್ಲದಿರುವುದಕ್ಕೆ ಪ್ರಕರಣದ ತನಿಖೆಗೆ ಬಂದು ಸಹಕರಿಸಬೇಕು. ನೋಟಿಸ್ ತಲುಪಿದ ತಕ್ಷಣ ನಗರ ಚಾಮರಾಜ ಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ತನಿಖೆಗೆ ಹಾಜರಾಗಬೇಕು. ಇಲ್ಲವಾದಲ್ಲಿ ಉದ್ದೇಶ ಪೂರ್ವಕವಾಗಿ ತನಿಖೆಗೆ ಸಹಕಾರ ನೀಡದ ಆರೋಪದಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡುವ ನೋಟಿಸ್ ಅಂಟಿಸಿದ್ದಾರೆ.