ಬೆಂಗಳೂರು: ನಾಳೆಯಿಂದ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿ ನಾಲ್ಕು ಸಾರಿಗೆ ನಿಗಮಗಳ ಸಂಚಾರ ಸಂಪೂರ್ಣ ನಿಲ್ಲಬೇಕು. ಯಾವೊಬ್ಬ ನೌಕರನೂ ಕೆಲಸಕ್ಕೆ ಹಾಜರಾಗೋದಿಲ್ಲ. ಯಾವ ಸಿಬ್ಬಂದಿಗೆ ನೋಟಿಸ್ ಕೊಡ್ತೀರೋ ಕೊಡಿ. ನಾವು ನಿಮ್ಮ ಬಂಡವಾಳವನ್ನು ಆಚೆಗೆ ತೆಗೆಯುತ್ತೇವೆ. ಇಲಾಖೆಯಲ್ಲಿ ಕಳ್ಳತನ ಮಾಡುವವರಿದ್ದರೆ ಅವರ ಬಂಡವಾಳವೂ ಹೊರಗೆ ಬರಲಿ ಎಂದು ಫ್ರೀಡಂ ಪಾರ್ಕ್ ಬಳಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಯಡಿಯೂರಪ್ಪನವರ ಸರಕಾರ ಪೊಲೀಸರನ್ನು ಇಟ್ಟುಕೊಂಡು ದರ್ಪ ತೋರಿಸುತ್ತಿದೆ. ನಮ್ಮ ಸಾರಿಗೆ ನೌಕರರ ಬೇಡಿಕೆಯನ್ನು ಆಲಿಸಲು ಒಬ್ಬ ಸಚಿವ ಕೂಡ ಬಂದಿಲ್ಲ. ಇದೆಂಥಾ ಸರ್ಕಾರ? ಇವರಿಂದ ಸಂಬಳ ಪಡೆಯುವುದಕ್ಕಿಂತ ಜೈಲಿಗೆ ಹೋಗಿ ಬದುಕೋದೆ ವಾಸಿ ಎಂದು ವಾಗ್ದಾಳಿ ನಡೆಸಿದರು.
ನೌಕರರ ಅಹವಾಲನ್ನು ಕೇಳಲು 30 ನಿಮಿಷದಲ್ಲಿ ಸಂಬಂಧಪಟ್ಟ ಸಚಿವರನ್ನು ಕರೆತರುತ್ತೇವೆ ಎಂದು ಪೊಲೀಸರು ಹೇಳಿದರು. ಆದರೆ ಯಾರೊಬ್ಬರೂ ಬಂದಿಲ್ಲ. ಸಚಿವರು ಬಾರದಿದ್ದರೆ ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದ ಮಾತಿಗೆ ನಾವು ಬದ್ಧರಾಗಿದ್ದೇವೆ ಎಂದು ಕಿಡಿಕಾರಿದರು.
ನಾಯಿ ಸಾಕೋಕೆ ದುಡ್ ಕೊಡ್ತೀರಿ ಸಂಬಳ ಜಾಸ್ತಿ ಮಾಡೋಕೆ ಆಗಲ್ವಾ
ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ನಿಲ್ಲೋ ಸೆಕ್ಯುರಿಟಿ ಗಾರ್ಡ್ ಗಳಿಗೆ ಸಂಬಳ ಎಷ್ಟು ?ನಿಮ್ಮ ಮನೆಯಲ್ಲಿ ಸಾಕುವ ನಾಯಿಗೆ ಎಷ್ಟು ಖರ್ಚು ಮಾಡುತ್ತೀರಿ? ಆದರೆ ಹಗಲು-ರಾತ್ರಿ ದುಡಿಯುವ ಸಾರಿಗೆ ನೌಕರರಿಗೆ ಮಾತ್ರ 7ರಿಂದ 14 ಸಾವಿರ ರೂ. ಸಂಬಳ ಕೊಡುತ್ತೀರಿ. ಈ ರೀತಿ ಸಂಬಳ ಪಡೆಯುವ ಬದಲು ಒಂದು ತಿಂಗಳು ಜೈಲಿನಲ್ಲೇ ಇರೋದು ಉತ್ತಮ ಎಂದು ಆಕ್ರೋಶ ಹೊರಹಾಕಿದರು.
ಮಂತ್ರಿ, ಶಾಸಕರಿಗೆ ಕೊರೊನಾ ಬಂದರೆ ಐಶಾರಾಮಿ ಆಸ್ಪತ್ರೆಗೆ ಕಳುಹಿಸುತ್ತೀರಿ. ನಮ್ಮ ಕಾರ್ಮಿಕರಿಗೆ ಮಾತ್ರ ಈವರೆಗೂ ಚಿಕಿತ್ಸೆಯಿಲ್ಲ. ಪರಿಹಾರವೂ ಇಲ್ಲ. ಇದೊಂದು ಸರ್ಕಾರವೇ? ಇದೊಂದು ರೀತಿ ನೀತಿಯೆ? ಈ ರೀತಿಯ ವ್ಯವಸ್ಥೆ ಮುಂದುವರಿಸುವುದು ಬೇಡ. ಜೈಲಿಗೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎನ್ನುವುದಾದರೆ ಹಾಗೆಯೇ ಆಗಲಿ ನಮಗೆ ನ್ಯಾಯ ಸಿಗುವ ತನಕ ಸುಮ್ಮನಾಗೋದಿಲ್ಲ ಎಂದು ಕಿಡಿಕಾರಿದರು.