ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಜಿ.ಟಿ. ದೇವೇಗೌಡ ಅವರನ್ನು ನಾನು ರಾಜಕೀಯದಲ್ಲಿ ಇರೋವರೆಗೂ ವಾಪಸ್ ಜೆಡಿಎಸ್‌ಗೆ ಸ್ವೀಕರಿಸೋದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಕೆಲವು ನಾಯಕರು ಕೇಳಿದ್ರು ಅವರಿಗೆ ಸ್ವಲ್ಪ ಸಮಯ ಕೊಡಿ ಅಂತ, ಅದಕ್ಕೆ ಸಮಯ ಕೊಟ್ಟಿದ್ದೆ. ಆದರೆ, ಇನ್ನು ಸಮಯ ಕೊಡೋಕೆ ಆಗೋಲ್ಲ. ಇನ್ನು ಇವರ ಆಟ ನಡೆಯೋಲ್ಲ ಎಂದು ಹೇಳಿದ್ದಾರೆ.
ಮೈಸೂರಿನ ಜಲದರ್ಶಿನಿಯಲ್ಲಿ ಸಾ.ರಾ.ಮಹೇಶ್ ಭೇಟಿ ಮಾಡಿದ್ದಾಗಲು ಇದೆ ಹೇಳಿದ್ರು. ಸಾ.ರಾ.ಮಹೇಶ್ ಸಹ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ರು. ಆದರೆ, ಇವರು ಒಳಗೊಂದು ಮಾತನಾಡಿ ಹೊರಗೆ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿ ಹೇಳಿಕೆ ನೀಡುತ್ತಾರೆ. ಈಗ ಆಗಿರುವ ಡ್ಯಾಮೇಜ್ ಸಾಕು ಮತ್ತೆ ಇವರಿಗೆ ಟೈಂ ಕೊಡೋಕೆ ಸಾಧ್ಯವೇ ಇಲ್ಲ ಅವರನ್ನು ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಬೆಳಗ್ಗೆ ಕಾಂಗ್ರೆಸ್, ಮಧ್ಯಾಹ್ನ ಜೆಡಿಎಸ್, ರಾತ್ರಿ ಬಿಜೆಪಿಯವರ ಮನೆಗಳಿಗೆ ಹೋಗುತ್ತಾರೆ. ಎಲ್ಲರ ವಿಶ್ವಾಸಗಳಿಸೋಕೆ ಓಡಾಡುತ್ತಿದ್ದಾರೆ. ಎಲ್ಲೂ ಗಿಟ್ಟಲ್ಲ ಅಂದ್ರೆ ಕೊನೆಗೆ ನಮ್ಮತ್ರಾನೆ ಬರ್ತಾರೆ ಅಂತಾನೂ ಗೊತ್ತು. ಆದ್ರೆ ಎಲ್ಲ ಸುತ್ತಿಕೊಂಡು ವಾಪಸ್ ಬಂದಾಗ ಜೆಡಿಎಸ್ ಅವರನ್ನ ಸ್ವೀಕರಿಸೋದಿಲ್ಲ ಎಂದು ಜಿಟಿಡಿ ವಿರುದ್ಧ ಗುಡುಗಿದ್ದಾರೆ.
ದೇವೇಗೌಡ ಒಬ್ಬ ಮಹಾನ್ ಸುಳ್ಳುಗಾರ. ತುಂಬಾ ದಿನ ಸುಳ್ಳು ಹೇಳಿಕೊಂಡು ತಿರುಗೋಕಾಗೋಲ್ಲ. ಸಾ.ರಾ. ಮಹೇಶ್ ಅರನ್ನು ನಾನು ಬೆಳೆಸಿದೆ ಅಂತ ಹೇಳಿದ್ದರು. ದೇವೇಗೌಡರ ಜತೆ ಮಾತನಾಡಿದ್ದೇನೆ ಬೆಳಗ್ಗೆ ಮಂತ್ರಿಯಾಗ್ತಿಯಾ ಹೋಗು ಅಂತ ಹೇಳಿದ್ದರು. ಆದ್ರೆ ಯಾರ ಜತೆಯೂ ಅವರು ಮಾತುಕತೆ ನಡೆಸಿರಲಿಲ್ಲ. ಸಾ.ರಾ.ಮಹೇಶ್ ಅರನ್ನ ಮಂತ್ರಿ ಮಾಡಿದವನು ನಾನು ಇವರಲ್ಲ ಎಂದು ತಿರುಗೇಟು ನೀಡಿದರು.
ಅಷ್ಟೇ ಯಾಕೇ ಜಿ.ಟಿ. ದೇವೇಗೌಡ ಅರನ್ನು ಸಹಕಾರಿ ಕ್ಷೇತ್ರಕ್ಕೆ ಪರಿಚಯಿಸಿದ್ದೆ ನಾನು. ಆಗ ನಾನು ರಾಜಕಾರಣದಲ್ಲಿ ಇರಲಿಲ್ಲ. ಆದ್ರೂ ಮನೆಯಲ್ಲಿ ಮಲಗಿದ್ದ ಇವರನ್ನ ಕರೆದು ಸಹಕಾರ ಮಹಾಮಂಡಳಿ ಅಧ್ಯಕ್ಷರಾಗಿ ಮಾಡಿದ್ವಿ. ಇವರು ಸಹಕಾರಿ ಕ್ಷೇತ್ರಕ್ಕೆ ಬರೋಕೆ ನನ್ನ ಪಾತ್ರವು ಇದೆ ಎಂದು ತಿಳಿಸಿದರು.
ಅವರು ಶಕ್ತಿ ಪ್ರದರ್ಶನ ಮಾಡಿಕೊಂಡು ಅವರ ದಾರಿಲಿ ಹೋಗಲಿ. ನಾವು ನಮ್ಮ ದಾರಿಲಿ ಹೋಗ್ತಿವಿ. ನಾನು ಪಕ್ಷಕ್ಕಿಂತ ಬೆಳೆದಿದ್ದೇನೆ ಅಂತ ಅವರು ಅಂದುಕೊಂಡಿದ್ದಾರೆ. ಆದರೆ, ಪಕ್ಷಕ್ಕಿಂತ ಬೆಳೆಯೋಕೆ ಅವರಿಗೂ ಆಗೋಲ್ಲ, ನನಗೂ ಆಗೋಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್‌ನಿಂದ ಜಿಟಿಡಿರನ್ನ ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ. ಆದ್ರೆ ಮೈಸೂರು ಭಾಗದ ಬೆಳಗವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕಾರ್ಯಕರ್ತರೇ ಈ ಬಗ್ಗೆ ತೀರ್ಮಾನ ಮಾಡ್ತಾರೆ. ನಾನು ಉಚ್ಚಾಟನೆ ಮಾಡಿದರೆ ಜನರ ಅನುಕಂಪದ ಲಾಭ ಗಿಟ್ಟಿಸಬಹುದೆಂದು ಕಾಯುತ್ತಿದ್ದಾರೆ. ಯಾವಾಗ ಕ್ರಮ ತೆಗೆದುಕೊಳ್ಳಬೇಕು ಅವಾಗ ತಗೊಳ್ತೀನಿ
ಜೆಡಿಎಸ್ ದೇವೆಗೌಡರ ಹಿಡಿತದಲ್ಲಿಲ್ಲ ಎಂಬ ಜಿಟಿಡಿ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, “ನನ್ನ ತಂದೆಗೆ ಗೌರವ ಕೊಡೋದನ್ನ ಇವರಿಂದ ಕಲಿಯಬೇಕಿಲ್ಲ. ನಾಲಿಗೆ ಮೇಲೆ ಹಿಡಿತ ಇಟ್ಕೊಂಡು ನಮ್ಮ ಕುಟುಂಬದ ಬಗ್ಗೆ ಮಾತನಾಡಲಿ. ನಿಮ್ಮಂತವರನ್ನ ನಂಬೀಯೆ ಪಕ್ಷ ಹೀಗೆ ಆಗಿದೆ. ನಿಮ್ಮಂತವರನ್ನು ಬೆಳೆಸಿದ್ದಕ್ಕೆ ಈ ಪಕ್ಷ ಹೀಗೆ ಆಗಿದೆ” ಎಂದು ಜಿಟಿಡಿ ವಿರುದ್ದ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.