ಬೆಂಗಳೂರು: ಕೊರೊನಾ ಮೂರನೇ ಅಲೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಳೆ ಸ್ವಾತಂತ್ರ್ಯ ದಿನಾಚರಣೆ ಬಳಿಕ ಕಠಿಣ ನಿಯಮ ಜಾರಿಗೆ ತರುವ ಸಾಧ್ಯತೆ ಬಹುತೇಕ ನಿಚ್ಚಳ ಎಂದು ಹೇಳಲಾಗುತ್ತಿದೆ.
ಹಂತ ಹಂತವಾಗಿ ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ರಾಜ್ಯಸರ್ಕಾರ ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ತಜ್ಞರು, ಆರೋಗ್ಯಾಧಿಕಾರಿಗಳ ಸಭೆ ನಡೆಯಲಿದೆ.
ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ತಜ್ಞರು, ಸರ್ಕಾರದ ಪ್ರಮುಖ ಅಧಿಕಾರಿಗಳು, ಗೃಹ ಸಚಿವರು ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ತಜ್ಞರೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಬೊಮ್ಮಾಯಿಯವರು ಬೆಂಗಳೂರು ಸೇರಿದಂತೆ ಜಿಲ್ಲೆಗಳಿಗೆ ಕೊರೊನಾ ಮೂರನೇ ಅಲೆಯನ್ನು ಆರಂಭದಲ್ಲಿಯೇ ನಿಯಂತ್ರಿಸಲು ಹೊಸ ನಿಯಮಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.
ಮೊದಲಿಗೆ ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ, ಲಾಕ್ ಡೌನ್ ಸೇರಿದಂತೆ ಹಂತಹಂತವಾಗಿ ಒಂದು ವಾರ ಲಾಕ್ ಡೌನ್ ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಇನ್ನು ಕೆಲದಿನಗಳವರೆಗೆ ಬೆಂಗಳೂರು ಲಾಕ್ ಆಗುವುದು ಪಕ್ಕಾ ಎನ್ನಲಾಗುತ್ತಿದೆ.
ಕೊರೊನಾ ಮೂರನೇ ಅಲೆ ಬೆಂಗಳೂರಿನ ಅಪಾರ್ಟ್ ಮೆಂಟ್ ನಿವಾಸಿಗಳಲ್ಲಿ ಹೆಚ್ಚು ಕಾಡುತ್ತಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಪಾರ್ಟ್ ಮೆಂಟ್ ಗಳಿಗೆ ಹೊಸ ನಿಯಮ ಜಾರಿಗೆ ತಂದಿದ್ದು ನಿಯಮ ಉಲ್ಲಂಘಿಸಿದರೆ ಕಂಟಕ ಕಾದಿದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಅಪಾರ್ಟ್ ಮೆಂಟ್ ನ ಜಿಮ್ ಗಳಿಗೆ 50-50 ನಿಯಮ ಜಾರಿಗೆ, 3 ವರ್ಷದ ಮೇಲ್ಪಟ್ಟ ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯ, ಕೊರಿಯರ್ ಸೇರಿದಂತೆ ಡೆಲಿವರಿ ಸೇವೆಗಳನ್ನು ಅಪಾರ್ಟ್ ಮೆಂಟ್ ಗಳಲ್ಲಿ ಕಡಿಮೆ ಮಾಡಬೇಕು. ಆರೋಗ್ಯ ಸಿಬ್ಬಂದಿ ತಪಾಸಣೆಗೆ ಬಂದರೆ ನಿವಾಸಿಗಳು ಸಹಕರಿಸಬೇಕು ಎಂದು ಬಿಬಿಎಂಪಿ ನಿಯಮ ಪ್ರಕಟಿಸಿದೆ.
ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಕೊರೊನಾ ನೆಗೆಟಿವ್ ವರದಿ ಮತ್ತು ಲಸಿಕೆ ಪಡೆದ ಸರ್ಟಿಫಿಕೇಟ್ ಕಡ್ಡಾಯ ಎಂದು ಹೇಳಲಾಗುತ್ತಿದೆ.
ಮೈಸೂರಿನಲ್ಲಿ ವೀಕೆಂಡ್ ಲಾಕ್
ಸಾಂಸ್ಕೃತಿಕ ನಗರಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೊರೊನಾ ಹೆಚ್ಚುತ್ತಿರುವುದರಿಂದ ವೀಕೆಂಡ್ ಲಾಕ್ ಡೌನ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.