ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಬಸವಣ್ಣನಂತಹ ಮಹಾತ್ಮರಿಂದ ಪ್ರೇರಿತವಾದ ರಾಜ್ಯ ಇದಾಗಿದ್ದು, ಕರ್ನಾಟಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಂದಿನಿಂದ ರಾಜಧಾನಿ ಬೆಂಗಳೂರಿನಲ್ಲಿ 3 ದಿನಗಳ ಕಾಲ ಏರ್ ಶೋ ನಡೆಯುತ್ತಿದ್ದು ಈ ವೇಳೆ ಮಾತನಾಡಿದ ಅವರು, ಅನೇಕ ಅವಕಾಶಗಳಿಗೆ ಏರೋ ಇಂಡಿಯಾ-2021 ವೇದಿಕೆ ಒದಗಿಸುತ್ತದೆ. ಏರ್ ಶೋ ನಮ್ಮ ದೇಶದ ಶಕ್ತಿ ಪ್ರದರ್ಶನದ ವೇದಿಕೆಯೂ ಹೌದು ಎಂದರು.
ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಏರ್ ಶೋ ಇದಾಗಿದ್ದು, ಭಾರತೀಯ ತಯಾರಿಕೆಯ ತೇಜಸ್ ಯುದ್ಧವಿಮಾನಕ್ಕೆ ಸಾಕಷ್ಟು ಬೇಡಿಕೆಯಿದೆ. ಈಗಾಗಲೇ 83 ತೇಜಸ್ ವಿಮಾನಗಳಿಗೆ ಆರ್ಡರ್ ಬಂದಿದ್ದು, ಇದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಉಗ್ರರ ಹಾವಳಿ ಇಡೀ ವಿಶ್ವವನ್ನು ಕಾಡುತ್ತಿದೆ. ದೇಶದ ಗಡಿಗೆ ಅಪಾಯ ಒಡ್ಡುವ ಉಗ್ರರ ಚಟುವಟಿಕೆಗಳನ್ನು ಮಟ್ಟ ಹಾಕುವ ಕೆಲಸ ಮಾಡಿಯೇ ತೀರುತ್ತೇವೆ ಎಂದರು.
ಇನ್ನುಈ ಏರ್ ಶೋಗೆ ಮಾಲ್ಡೀವ್ಸ್, ಉಕ್ರೇನ್, ಮಡಗಾಸ್ಕರ್, ಗಿನಿಗಳಿಂದ ರಕ್ಷಣಾ ಸಚಿವರು ಆಗಮಿಸಿದ್ದಾರೆ. ತೇಜಸ್ ಯುದ್ಧ ವಿಮಾನಗಳ ಜತೆಗೆ 83 ವಿಮಾನಗಳ ಆರ್ಡರ್ ಗೆ ಡೀಲ್ ಸಹಿ ಮಾಡಲಾಗುತ್ತಿದೆ. ಇದರಲ್ಲಿ 75 LCA Tejas, Mk 1A ಮತ್ತು 8 ಟ್ರೇನರ್ ಏರ್ ಕ್ರಾಫ್ಟ್ ಗಳು ಸೇರಿವೆ ಎಂದು ವಿವರಿಸಿದರು.
ನಮ್ಮ ದೇಶದಲ್ಲೇ ತಯಾರಾದ ಎರಡು ಕೋವಿಡ್ ಲಸಿಕೆಗಳು ಇಡೀ ಪ್ರಪಂಚದಲ್ಲಿ ಕೋವಿಡ್ನಿಂದ ತತ್ತರಿಸಿಸಿರುವ ಬೇರೆ ದೇಶಗಳಲ್ಲೂ ಜೀವ ಉಳಿಸುವ ಕೆಲಸ ಮಾಡುತ್ತಿವೆ. ನಾವು 217 ಮಿಲಿಯನ್ ಜನರಿಗೆ ಕೋವಿಡ್ ಲಸಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ. ವಸುಧೈವ ಕುಟುಂಬಕಂ ಎನ್ನುವ ಧ್ಯೇಯದೊಂದಿಗೆ ಕೆಲಸ ಮಾಡುವ ದೇಶ ನಮ್ಮದು ಎಂದು ತಿಳಿಸಿದರು.