ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮತ್ತು ಪತ್ನಿ ಪ್ರತಿಭಾ ಶರತ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬುಧವಾರ ಸಂಜೆ ಇಬ್ಬರಿಗೂ ಪಾಸಿಟಿವ್ ಎಂದು ಫಲಿತಾಂಶ ಬಂದಿದೆ ಎಂದು ಶರತ್ ಅವರೇ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಸದ್ಯ ವೈದ್ಯರ ಸಲಹೆ ಪಡೆದುಕೊಂಡು ಮನೆಯಲ್ಲೇ ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇವೆ. ಇಬ್ಬರೂ ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಟ್ಟಿದ್ದೀವಿ. ಈಗಾಗಲೇ ನನ್ನನ್ನು ಭೇಟಿಯಾದ ವ್ಯಕ್ತಿಗಳ ವಿವರವನ್ನು ಅಧಿಕಾರಿಗಳಿಗೆ ಕೊಟ್ಟಿರುವೆ ಎಂದು ಹೇಳಿದ್ದಾರೆ.
ಮೈ ಕೈ ನೋವು ಕಾಣಿಸಿಕೊಂಡಿತ್ತು
ಜುಲೈ 6ರ ಸೋಮವಾರದಂದು, ನನಗೆ ಸ್ವಲ್ಪ ಮೈ ಕೈ ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ನಾನು ಮತ್ತು ನನ್ನ ಪತ್ನಿ ಪ್ರತಿಭಾ ಶರತ್ ಒಳಗಾಗಿದ್ದೆವು.
ಆದರೂ ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಲು ವಿನಂತಿಸುತ್ತೇನೆ. ರೋಗ ನಿರೋಧಕ ಶಕ್ತಿಯು ನಮ್ಮಲ್ಲಿ ಪ್ರಬಲವಾಗಿದೆ ಮತ್ತು ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರುವುದರಿಂದ ಬೇಗ ಗುಣಮುಖ ಆಗುತ್ತೇವೆ ಎಂದು ಶರತ್ ಬಚ್ಚೇಗೌಡ ಹೇಳಿದ್ದಾರೆ.