ನ್ಯೂಡೆಲ್ಲಿ: ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ, ಪತಿ ಶಶಿ ತರೂರ್ ಅವರು ನಿರ್ದೋಷಿ ಎಂದು ದೆಹಲಿ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಈ ಮೂಲಕ ಕಳೆದ ಏಳೂವರೆ ವರ್ಷಗಳ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ.
ಸುನಂದಾ ಪುಷ್ಕರ್ 2014ರ ಜನವರಿ 17ರಂದು ದೆಹಲಿಯ ಫೈವ್ ಸ್ಟಾರ್ ಹೊಟೇಲ್ ನ ಕೋಣೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಸುನಂದಾ ಮರಣಕ್ಕೆ ಶಶಿ ತರೂರ್ ನೀಡುತ್ತಿದ್ದ ಮಾನಸಿಕ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಗಳು ಕೇಳಿ ಬಂದಿದ್ದವು.
ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ತರೂರ್ ಅವರಿಗೆ 2018ರ ಜುಲೈ 5 ರಂದು ಜಾಮೀನು ಮಂಜೂರಾಗಿತ್ತು. ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಶಶಿ ತರೂರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಅತ್ಯಂತ ಕೃತಜ್ಞ: ತಮ್ಮನ್ನು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಶಶಿ ತರೂರ್, ನ್ಯಾಯಾಲಯದ ತೀರ್ಪಿಗೆ ಅತ್ಯಂತ ಗೌರವದಿಂದ ಕೃತಜ್ಞನಾಗಿದ್ದೇನೆ. ಕಳೆದ ಏಳೂವರೆ ವರ್ಷಗಳ ಕಾಲ ಅತ್ಯಂತ ಹಿಂಸೆ ಅನುಭವಿಸಿದ್ದೇನೆ ಎಂದಿದ್ದಾರೆ.
ತರೂರ್ ಗೆ ಅಕ್ರಮ ಸಂಬಂಧ-ಸುನಂದಾ ಗೆಳತಿ ಹೇಳಿಕೆ: ಸುನಂದಾ ಪುಷ್ಕರ್ ಗೆಳತಿ, ಪತ್ರಕರ್ತೆ ನಳಿನಿ ಸಿಂಗ್ ಹೇಳಿಕೆ ಈ ಪ್ರಕರಣದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಮೆಹರ್ ತರಾರ್ ಎಂಬ ಮಹಿಳೆ ಜೊತೆ ಶಶಿ ತರೂರ್ ಅಕ್ರಮ ಸಂಬಂಧ ಹೊಂದಿದ್ದರು. ಒಮ್ಮೆ ಶಶಿ ತರೂರ್ ಮತ್ತು ಮೆಹರ್ ದುಬೈನ ಹೋಟೆಲ್ ನಲ್ಲಿ ಮೂರು ದಿನ ಉಳಿದುಕೊಂಡಿದ್ದರು ಎಂದು ಸುನಂದಾ ನನ್ನ ಮುಂದೆ ಹೇಳಿಕೊಂಡಿದ್ದರು.
ಒಮ್ಮೆ ಸುನಂದಾ ನನಗೆ ಫೋನ್ ಮಾಡಿದಾಗ ದುಃಖದಲ್ಲಿದ್ದರು. ತರೂರ್ ಮತ್ತು ಮೆಹರ್ ನಡುವೆ ಮೆಸೇಜ್ ಮೂಲಕ ಸಂಪರ್ಕ ಹೊಂದಿದ್ದರು. ಚುನಾವಣೆ ಬಳಿಕ ಸುನಂದಾಗೆ ವಿಚ್ಛೇದನ ನೀಡುವದಾಗಿ ತರೂರ್ ಮೆಸೇಜ್ ಮಾಡಿದ್ದರು ಎಂದು ನಳಿನಿ ಸಿಂಗ್ ಹೇಳಿಕೆ ದಾಖಲಿಸಿದ್ದರು.