ಬುಲ್ಧಾನ/ಅಕೋಲಾ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) 29 ವರ್ಷದ ನೌಕರರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಖಾಮಗಾಂವ್ ತಾಲೂಕಿನ ಮತರಗಾಂವ್ ನಿವಾಸಿ ವಿಶಾಲ್ ಅಂಬಲ್ಕರ್ ಮಂಗಳವಾರ ರಾತ್ರಿ ತನ್ನ ಮನೆಯಲ್ಲಿ ವಿಷ ಸೇವಿಸಿದ್ದು, ಅವರನ್ನು ಅಕೋಲಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ ಎಂದು ಖಮಗಾಂವ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ಅಂಬಲ್ಕರ್ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಬುಧವಾರ ರಾತ್ರಿ ಅವರ ಆರೋಗ್ಯ ಸ್ಥಿತಿ ಇನಷ್ಟು ಬಿಗಡಾಯಿಸಿತು. ಅವರನ್ನು ಉಳಿಸಿಕೊಳ್ಳಲು ಅಕೋಲಾದ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಸತತ ಪ್ರಯತ್ನಪಟ್ಟು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇಲ್ಲಿಯವರೆಗೆ 38 ಮಂದಿ ಎಂಎಸ್ಆರ್ಟಿಸಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸರ್ಕಾರದೊಂದಿಗೆ ಎಂಎಸ್ಆರ್ಟಿಸಿಯನ್ನು ವಿಲೀನಗೊಳಿಸಬೇಕು ಎಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಿರತ ನೌಕರರೊಂದಿಗೆ ಮಾತನಾಡಲು ಸರ್ಕಾರ ಮುಂದಾಗಿಲ್ಲ.