ಮುಂಬೈ: 25 ನೇ ದಿನವೂ ಮುಷ್ಕರ ಮುಂದುವರಿದಿದ್ದು, ಕೈ ಬಿಡಲು ನಿರಾಕರಿಸಿದ ಕಾರಣ ಮಹಾರಾಷ್ಟ್ರ ಸರ್ಕಾರ ಮತ್ತೆ 380 MSRTC ನೌಕರರನ್ನು ಶನಿವಾರ ಸೇವೆಯಿಂದ ವಜಾಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಲ್ಲದೆ, ಶನಿವಾರ ಕೂಡ 161 ನೌಕರರನ್ನು ಅಮಾನತುಗೊಳಿಸಿ ಅದೇಶ ಹೊರಡಿಸಿದೆ. ಈ ಮೂಲಕ ಅಮಾನತುಗೊಂಡ ಒಟ್ಟು ನೌಕರರ ಸಂಖ್ಯೆ 2,937 ಕ್ಕೆ ತಲುಪಿದೆ. ಏತನ್ಮಧ್ಯೆ, ಸಾರಿಗೆ ಸಚಿವ ಅನಿಲ್ ಪರಬ್, ನಿಗಮವನ್ನು ವಿಲೀನಗೊಳಿಸಬೇಕು ಎಂಬ ಬೇಡಿಕೆ ಹೊರತುಪಡಿಸಿ ಉಳಿದ ಎಲ್ಲ ಬೇಡಿಕೆಗಳ ಈಡೇರಿಸುವ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ, ಸರ್ಕಾರವು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 90,000ಕ್ಕೂ ಹೆಚ್ಚು ನೌಕರರಲ್ಲಿ 618 ಜನರನ್ನು ಹಲವಾರು ಮನವಿಗಳ ಹೊರತಾಗಿಯೂ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂಬ ಕಾರಣ ಸೇವೆಯಿಂದ ವಜಾಗೊಳಿಸಿದೆ.
ಈ ಮುಷ್ಕರದ ನಡುವೆಯೂ ನಿಗಮವು ಶನಿವಾರ 143 ಬಸ್ಗಳ ಕಾರ್ಯಾಚರಣೆಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಒಟ್ಟು 4,280 ಪ್ರಯಾಣಿಕರು ಸುರಕ್ಷಿತವಾಗಿ ನಿಗಮದ ಬಸ್ಗಳಲ್ಲಿ ಸಂಚರಿಸುವ ಮೂಲಕ ಅವರು ಸೇರಬೇಕಾದ ಸ್ಥಳವನ್ನು ತಲುಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿರುವ ನಿಗಮವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಅಕ್ಟೋಬರ್ 28 ರಿಂದ ನೌಕರರು ಮುಷ್ಕರ ನಡೆಸುತ್ತಿದ್ದು ಅವರ ಪ್ರಮುಖ ಬೇಡಿಕೆ ಹೊರತುಪಡಿಸಿ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಕುರಿತ ಚರ್ಚೆಗೆ ಸರ್ಕಾರ ಸಿದ್ಧ ಎಂದು ಸಚಿವ ಪರಬ್ ಸುದ್ದಿಗಾರರಿಗೆ ತಿಳಿಸಿದರು.
ಅಲ್ಲದೇ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ಬಾಂಬೆ ಹೈಕೋರ್ಟ್ನ ಆದೇಶದ ಮೇರೆಗೆ ನೇಮಕಗೊಂಡ ಸಮಿತಿ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಹೇಳಿದರು.
ಕೇವಲ ರಾಜಕೀಯಕ್ಕಾಗಿ ಕೆಲ ನಾಯಕರು ನೌಕರರನ್ನು ದಾರಿತಪ್ಪಿಸುತ್ತಿದ್ದು ಅಂಥ ನಾಯಕರ ಮಾತಿಗೆ ನೌಕರರು ಕಿವಿಗೊಡಬಾರದು. ಹೀಗೆ ಮಾಡುವುದರಿಂದ ನೌಕರರು ತಮ್ಮ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿದಿಕೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿಯನ್ನು ನೀಡಿದರು.
ಸಾರಿಗೆ ನೌಕರರ ಈ ಮುಷ್ಕರದಿಂದ ರಾಜ್ಯದಾದ್ಯಂತ ಲಕ್ಷಾಂತರ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಎಂಎಸ್ಆರ್ಟಿಸಿ ಅಥವಾ `ಎಸ್ಟಿ’ (ರಾಜ್ಯ ಸಾರಿಗೆ) ಬಸ್ಗಳು ಸಾರ್ವಜನಿಕ ಪ್ರಯಾಣಕ್ಕೆ ತುಂಬಾ ಅನುಕೂಲಕರವಾಗಿದ್ದಾವೆ.
ಒಟ್ಟಾರೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಇಂದಿಗೆ (ಭಾನುವಾರಕ್ಕೆ) 25ದಿನಕ್ಕೆ ಕಾಲಿಟ್ಟಿದ್ದು ಬೇಡಿಕೆ ಈಡೇರದ ಹೊರತು ಮುಷ್ಕರ ವಾಪಸ್ ಪಡೆಯುವ ಮಾತೆ ಇಲ್ಲ ಎಂದು ನೌಕರರ ಸಂಘಟನೆಗಳ ಪದಾಧಿಕಾರಿಗಳು ಮತ್ತೊಮ್ಮೆ ಸರ್ಕಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.