ನ್ಯೂಡೆಲ್ಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆಯಾಗಿದ್ದು, ಇದರಿಂದ ಕೆಲವರು ಅಸಮಾಧಾನಗೊಂಡಿದ್ದಾರೆ. ಇದೀಗ ಅಸಮಾಧಾನಿತ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ದೆಹಲಿಗೆ ಬಂದಿಳಿದಿದ್ದಾರೆ.
ಸಚಿವ ಸ್ಥಾನ ಕೈ ತಪ್ಪಿದ ಬಳಿಕ ಮೊದಲ ಬಾರಿಗೆ ದೆಹಲಿಗೆ ಬಂದಿರುವ ಯೋಗೇಶ್ವರ್, ಕರ್ನಾಟಕ ಭವನಕ್ಕೆ ತೆರಳಿದ್ದಾರೆ. ಇಂದು ಅವರು ಹೈಕಮಾಂಡ್ ನಾಯಕರ ಭೇಟಿಯಾಗುವ ಸಾಧ್ಯತೆಗಳಿವೆ. ಅಲ್ಲದೆ ಹೈಕಮಾಂಡ್ ಬಳಿ ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಅಸಮಾಧಾನ ಹೊರ ಹಾಕುವ ಸಾಧ್ಯತೆ ಕೂಡ ದಟ್ಟವಾಗಿದೆ.
ಇದೇ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಲು ಸಿಪಿವೈ ನಿರಾಕರಿಸಿದ್ದಾರೆ. ವಕೀಲರ ಭೇಟಿಗೆ ಬಂದಿರುವುದಾಗಿ ಹೇಳುವ ಮೂಲಕ ದೆಹಲಿ ಭೇಟಿ ಬಗ್ಗೆ ಗೌಪ್ಯತೆ ಬಿಟ್ಟು ಕೊಡಲು ಹಿಂದೇಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸೈನಿಕ, ದೆಹಲಿಯಲ್ಲಿ ಸೀಕ್ರೆಟ್ ಮಿಷನ್ ಆರಂಭಿಸಿದ್ರಾ ಅನ್ನೋ ಅನುಮಾನವೊಂದು ಎದ್ದಿದೆ.
ಇತ್ತ ಹೈಕಮಾಂಡ್ ಒಂದು ವೇಳೆ ಸಿ.ಪಿ.ಯೋಗೇಶ್ವರ್ ಭೇಟಿಗೆ ಸಮಯ ನೀಡಿದ್ದಲ್ಲಿ ದೆಹಲಿಗೆ ಬರುವ ಅಸಮಾಧಾನಿತರ ಸಂಖ್ಯೆ ಹೆಚ್ಚಳವಾಗಲಿದೆ. ಸಚಿವ ಸ್ಥಾನ ಸಿಗದ ನಾಯಕರು ಪದೇಪದೆ ಹೈಕಮಾಂಡ್ ಭೇಟಿಯಾಗುವ ಬೆಳವಣಿಗೆ ಹೆಚ್ಚಾಗಬಹುದು. ಈ ಹಿನ್ನೆಲೆ ಹೈಕಮಾಂಡ್ ಅವಕಾಶ ನೀಡುತ್ತಾ..? ಇಲ್ವಾ..? ಅನ್ನೋದು ಕುತೂಹಲ ಹುಟ್ಟಿದೆ.