ನ್ಯೂಡೆಲ್ಲಿ: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ತಣ್ಣಗಾಗುವ ಮುನ್ನವೇ ಇತ್ತ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರ ತಾರಕಕ್ಕೇರಿದೆ. ಇದರ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೂರು ದಿನಗಳ ಭೇಟಿಗಾಗಿ ಭಾನುವಾರ ದೆಹಲಿಗೆ ತೆರಳಿದ್ದಾರೆ. ಈ ವಿಚಾರ ಈಗ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದು, ಅಧ್ಯಕ್ಷರಾದ ಬಳಿಕ ದೆಹಲಿಗೆ ಬಂದಿರಲಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ಕೊಟ್ಟರೆ ಭೇಟಿಯಾಗುತ್ತೇನೆ.
ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರ ಬದಲಾವಣೆಗೆ ಮನವಿ ಮಾಡುತ್ತೇನೆ. ಒಂದು ವರ್ಷದಿಂದ ಎಲ್ಲವನ್ನೂ ಗಮನಿಸಿದ್ದೇನೆ. ಯಾರು ಕೆಲಸ ಮಾಡುತ್ತಾರೆ ಮಾಡಲ್ಲ ಅಂತ ಗೊತ್ತಿದೆ. ಕೆಲವರನ್ನು ಬದಲಾವಣೆ ಮಾಡಬೇಕು ಎಂದು ತೀರ್ಮಾನಿದ್ದೇವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇನ್ನು ಸಿಎಂ ಸ್ಥಾನದ ಬಗ್ಗೆ ದೆಹಲಿ ಹೈಕಮಾಂಡ್ ನಿರ್ಧಾರ ಮಾಡುತ್ತಾರೆ. ಸದ್ಯಕ್ಕೆ ಈ ಸ್ಥಾನ ಖಾಲಿ ಇಲ್ಲ. ಖಾಲಿ ಇಲ್ಲದೆ ಇರುವ ಸ್ಥಾನಕ್ಕೆ ನಮಗ್ಯಾಕೆ ಪೈಪೋಟಿ. ನಮ್ಮಲ್ಲಿ ಯಾವುದೇ ಗುಂಪಿಲ್ಲ. ಯಾವುದೇ ಗುಂಪುಗಾರಿಕೆಗೆ ಅವಕಾಶ ಮಾಡಿ ಕೊಡಲ್ಲ. ನನ್ನ ಹೆಸರನ್ನು ಯಾರೂ ಹೇಳುವುದು ಬೇಡ. ಮೊದಲು ಪಕ್ಷ ಕಟ್ಟಬೇಕು, ಚುನಾವಣೆ ಗೆಲ್ಲಬೇಕು. ನಾವು ಈಗ ಕೊರೊನಾ ಸಂಕಷ್ಟದಲ್ಲಿ ಜನರೊಂದಿಗೆ ಇರೋಣ ಎಂದು ದೆಹಲಿಗೆ ಭೇಟಿ ನೀಡಿರುವ ಬಗ್ಗೆ ತಿಳಿಸಿದರು.
ಅಧಿಕಾರ ನಡೆಸಲು ಬಿಜೆಪಿಯವರಿಗೆ ಬರಲ್ಲವೆಂಬುವುದು ಸ್ಪಷ್ಟ
ಬಿಜೆಪಿಯವರಿಗೆ ಅಧಿಕಾರ ನಡೆಸಲು ಬರಲ್ಲವೆಂದು ಸ್ಪಷ್ಟವಾಗಿದೆ. ಸರ್ಕಾರದ ಕಾರ್ಯವೈಖರಿ ಬಗ್ಗೆ ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಪೊರೇಷನ್, ಜಿಲ್ಲಾ ಪಂಚಾಯಿತಿ ಚುನಾವಣೆ ಮೊದಲು ಗೆಲ್ಲಬೇಕು. ಸಿಎಂ ಸ್ಥಾನ ಬಗ್ಗೆ ಮಾತನಾಡೋಕೆ ಇದು ಸಮಯವಲ್ಲ. ಬಿಜೆಪಿಯವರು ಸಿಎಂ ಸ್ಥಾನದ ಬಗ್ಗೆ ಮಾತನಾಡಬೇಕು. ನಮ್ಮ ಪಕ್ಷದವರಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಕರ್ನಾಟಕದಲ್ಲಿ ಪೊಲೀಸ್ ವ್ಯವಸ್ಥೆಗೆ ಕಳಂಕ
ಶಾಸಕ ರಮೇಶ್ ಜಾರಕಿಹೊಳಿ ಮುಂಬೈಗೆ ತೆರಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆಶಿ, ಭಾರತೀಯ ಜನತಾ ಪಕ್ಷದಲ್ಲಿ ಬ್ಲ್ಯಾಕ್ಮೇಲ್ ನಡೆಯುತ್ತಿದೆ. ತಮಿಳುನಾಡಿನ ಮಾಜಿ ಸಚಿವ ಮಣಿಕಂಠನ್ ಬಂಧಿಸಿದ್ದಾರೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮಾಜಿ ಸಚಿವನ ಬಂಧನವಾಗಿದೆ.
ಆದರೆ, ರಮೇಶ್ ಜಾರಕಿಹೊಳಿಯನ್ನೂ ಈವರೆಗೆ ಬಂಧಿಸಿಲ್ಲ. ಕರ್ನಾಟಕದಲ್ಲಿ ಪೊಲೀಸ್ ವ್ಯವಸ್ಥೆಗೆ ಕಳಂಕ ಬಂದಿದೆ. ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಯನ್ನು ಬಂಧಿಸಿಲ್ಲವೇಕೆ ಎಂದು ಪ್ರಶ್ನಿಸಿದರು. ರಮೇಶ್ ಜಾರಕಿಹೊಳಿ ಪಕ್ಷಕ್ಕೆ ಅರ್ಜಿ ಹಾಕಲಿ ಮರುಸೇರ್ಪಡೆ ಬಗ್ಗೆ ಆನಂತರ ನೋಡುತ್ತೇವೆ ಎಂದ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.