ಬೆಂಗಳೂರು: ದೆಹಲಿ ಸರ್ಕಾರದಂತೆ ಕರ್ನಾಟಕ ಸರ್ಕಾರ ಕೂಡ ಕೋವಿಡ್ ಸಮಯವನ್ನು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಬಳಸಿಕೊಳ್ಳಬೇಕು ಎಂದು ದೆಹಲಿಯ ಎಎಪಿ ಶಾಸಕಿ, ಶಿಕ್ಷಣ ತಜ್ಞೆ ಆತಿಶಿ ಮಾರ್ಲೇನಾ ಹೇಳಿದರು.
ಬೆಂಗಳೂರಿನ ಲ್ಯಾವೆಲ್ ರಸ್ತೆಯಲ್ಲಿರುವ ರೋಟರಿ ಹಾಲ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಆಯೋಜಿಸಿದ್ದ “ಶಿಕ್ಷಣ ಸಮ್ಮೇಳನ” ಸಂವಾದದಲ್ಲಿ ಮಾತನಾಡಿದ ಆತಿಶಿ ಮಾರ್ಲೇನಾ, “ಏಳು ವರ್ಷಗಳ ಹಿಂದೆ ದೆಹಲಿಯ ಸರ್ಕಾರಿ ಶಾಲೆಗಳು ಕೂಡ ಕರ್ನಾಟಕದ ಈಗಿನ ಸರ್ಕಾರಿ ಶಾಲೆಗಳಂತೆ ಇದ್ದವು. ಶೌಚಾಲಯ, ಬೋರ್ಡ್, ಡೆಸ್ಕ್, ಟೇಬಲ್, ಕೊಠಡಿ ಯಾವುದೂ ಅಲ್ಲಿ ಸರಿಯಾಗಿರಲಿಲ್ಲ. ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿತ್ತು.
ರಾಜ್ಯದ ಭವಿಷ್ಯ ಚೆನ್ನಾಗಿರಬೇಕೆಂದರೆ ಈಗಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ನಿರ್ಧರಿಸಿದೆವು. ಬಜೆಟ್‌ನಲ್ಲಿ ಶೇ. 25ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟು, ಪ್ರತಿ ರೂಪಾಯಿಯೂ ಸರಿಯಾಗಿ ಬಳಕೆಯಾಗುವಂತೆ ಮಾಡಿದೆವು” ಎಂದು ಅನುಭವ ಹಂಚಿಕೊಂಡರು.
ಶಿಕ್ಷಣದಲ್ಲಿ ಸುಧಾರಣೆ ತರುವುದು ರಾಕೆಟ್ ಸೈನ್ಸ್‌ನಷ್ಟು ಕಷ್ಟವಲ್ಲ. ಬದಲಾವಣೆ ತರಬೇಕೆಂಬ ಇಚ್ಛಾಶಕ್ತಿ ಸರ್ಕಾರಕ್ಕೆ ಇದ್ದರೆ ಸುಲಭವಾಗಿ ತರಬಹುದು. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳ ಸರ್ಕಾರಕ್ಕೆ ಶಿಕ್ಷಣವು ಆದ್ಯತೆಯ ವಿಷಯವೇ ಆಗಿಲ್ಲ. ಆದ್ದರಿಂದ ದೆಹಲಿಯೇತರ ರಾಜ್ಯಗಳ ಸರ್ಕಾರಿ ಶಾಲೆಗಳು ಈಗಲೂ ಹಿಂದುಳಿದಿವೆ. ಸರ್ಕಾರಗಳು ಶಿಕ್ಷಣ ಕ್ಷೇತ್ರವನ್ನು ನೋಡುವ ರೀತಿ ಬದಲಾಗಬೇಕು ಎಂದರು.
ಖಾಸಗಿ ಶಾಲೆಗಳ ಲಾಬಿಗೆ ಮಣಿಯದೇ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಹಾಗೂ ಬೋಧನಾ ಗುಣಮಟ್ಟವನ್ನು ಅಭಿವೃದ್ಧಿ ಪಡಿಸಬೇಕು. ಉಪಕರಣಗಳ ಕೊರತೆಯಿಂದಾಗಿ ಕರ್ನಾಟಕದ 65% ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಕೊರೊನಾವನ್ನು ಬಿಟ್ಟರೆ, ಹಾಳಾಗಿರುವ ಶಿಕ್ಷಣ ವ್ಯವಸ್ಥೆಯೇ ದೇಶಕ್ಕೆ ಹೆಚ್ಚು ಮಾರಕವಾಗಿದೆ ಎಂದು ಆತಿಶಿ ಮಾರ್ಲೇನಾ ಅಭಿಪ್ರಾಯಪಟ್ಟರು.
ಬೋಧನಾ ಗುಣಮಟ್ಟದ ಅಭಿವೃದ್ಧಿಗೆ ಶಿಕ್ಷಕರನ್ನು ಮಾತ್ರವಲ್ಲದೇ ಪೋಷಕರ ಸಹಾಯವನ್ನೂ ಪಡೆಯಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ನಡುವೆ ಅನೇಕ ಸಲ ಸಭೆ, ಸಂವಾದ ಏರ್ಪಡಿಸಿದೆವು. ಅಲ್ಲಿ ಅಮೂಲ್ಯವಾದ ಸಲಹೆಗಳು ಕೇಳಿಬಂದವು. ಅದನ್ನು ಸರಿಯಾಗಿ ಕಾರ್ಯರೂಪಕ್ಕೆ ತರುವ ಕೆಲಸವನ್ನು ಎಎಪಿ ಸರ್ಕಾರ ಮಾಡಿತು ಎಂದು ವಿವರಿಸಿದರು.
ಶಿಕ್ಷಕರಿಗೆ ತಜ್ಞರಿಂದ ತರಬೇತಿ ಕೊಡಿಸಲಾಯಿತು. ಆಧುನಿಕ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಂಡೆವು. ಈ ಎಲ್ಲಾ ಕ್ರಮಗಳಿಂದ ಪೋಷಕರಿಗೆ ಸರ್ಕಾರದ ಮೇಲೆ ಹೆಮ್ಮೆ ಉಂಟಾಗಿ, ದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಸ್ವಯಂಪ್ರೇರಣೆಯಿಂದ ಎಎಪಿ ಪರವಾಗಿ ಕೆಲಸ ಮಾಡಿದರು. ಹೀಗೆ ನಾವು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದು ಎಎಪಿಯ ಬೆಳವಣಿಗೆಗೂ ಕಾರಣವಾಯಿತು ಎಂದು ಆತಿಶಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಎಎಪಿ ಮುಖಂಡ ಎಚ್.ಡಿ.ಬಸವರಾಜು, ಶಿಕ್ಷಣ ತಜ್ಞರಾದ ಗುರುರಾಜ್ ಕರ್ಜಗಿ, ತಾನ್ಯಾ ಜಯರಾಜ್, ಪುಷ್ಪಾ ತಂತ್ರಿ, ಬಿ.ಎಸ್.ಸೂರ್ಯಪ್ರಕಾಶ್, ಚಿದಾನಂದ್, ಗುರು ಕಾಸಿನಾಥನ್, ಸಂಜೀವ್ ನರೇನ್ ಮತ್ತಿತರರು ಉಪಸ್ಥಿತರಿದ್ದರು.