ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಪ್ರತಿದಿನ ಗಗನಕ್ಕೇರುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಅವರಾಗಲೀ, ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ ಸಂಕಷ್ಟದ ಕಾಲದಲ್ಲಿ ಬಡವರ ನೆರವಿಗೆ ನಿಲ್ಲುತ್ತಿಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿಯೂ ‘ಮೋದಿ ಮೋದಿ’ ಎಂದೇನಾದರೂ ಹೇಳಿದರೆ ಬಡವರ ಬದುಕು ಬೂದಿಯಾಗುವುದು ಖಚಿತ.
ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಿಪಿಎಲ್ ಕುಟುಂಬದವರಿಗೆ 10 ಕೆ.ಜಿ. ಅಕ್ಕಿ, 10 ಸಾವಿರ ರೂಪಾಯಿ ಕೊಡಿ ಎಂದರೆ ರಾಜ್ಯ ಸರ್ಕಾರ ಕೇಳುತ್ತಿಲ್ಲ. ರಾಜ್ಯ ಸರ್ಕಾರದ ಬಜೆಟ್ 2.42 ಲಕ್ಷ ಕೋಟಿ ರೂ. ಅದರಲ್ಲಿ 15-20 ಸಾವಿರ ಕೋಟಿ ರೂ.ಗಳನ್ನು ಬಡವರಿಗೆ ನೀಡಿದ್ದರೆ ಏನೂ ನಷ್ಟವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಘೋಷಿಸಿರುವ ಪುಡಿಗಾಸಿನ ಪ್ಯಾಕೇಜ್ ಯಾರಿಗೆ ಸಿಗುತ್ತೋ? ಬಿಡುತ್ತೋ? ಗೊತ್ತಿಲ್ಲ. ಕೊರೊನಾದಿಂದ ಮೃತರಾದರೆ ಕುಟುಂಬದಲ್ಲಿ ಒಬ್ಬರಿಗೆ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. ಆಸ್ಪತ್ರೆಯಲ್ಲಿ ಕುಟುಂಬದ ಒಬ್ಬರ ಚಿಕಿತ್ಸೆಗೆ ಮಾತ್ರ ಹಣ ಪಡೆಯುವರೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ನಿಂದ 32 ಸಾವಿರ ಜನ ಸತ್ತಿದ್ದಾರೆ. ಅದರಲ್ಲಿ ಬಿಪಿಎಲ್ ಕಾರ್ಡ್ ನವರು 25 ಸಾವಿರ ಮಂದಿ ಇರಬಹುದು, ಎಲ್ಲರಿಗೂ ತಲಾ ರೂ. 5 ಲಕ್ಷ ಪರಿಹಾರ ನೀಡಲು ಒಂದೂವರೆ ಸಾವಿರ ಕೋಟಿ ರೂ. ವೆಚ್ಚವಾಗಬಹುದು. ಅಷ್ಟು ಮಂದಿಗೂ ಪರಿಹಾರ ನೀಡಬೇಕು ಎಂದು ಸಿಎಂ ಬಿಎಸ್‌ವೈ ಅವರನ್ನು ಆಗ್ರಹಿಸಿದ್ದಾರೆ.
ಸೆಪ್ಟಂಬರ್-ಅಕ್ಟೋಬರ್ ನಲ್ಲಿ ಮೂರನೇ ಅಲೆ ಬರುವ ನಿರೀಕ್ಷೆ ಇದೆ. ಅಷ್ಟರಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ಕೊಡಬೇಕು. ಲಸಿಕೆ ಹಾಕಿಸಿಕೊಂಡ ಶೇ.80ರಷ್ಟು ಜನರಿಗೆ ಕೊರೊನಾ ಬರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.