ಮಂಗಳೂರು: ಸಿರಿಯಾ ಮೂಲದ ಐಸಿಸ್ ಉಗ್ರರ ಜೊತೆ ನಂಟು ಹೊಂದಿರುವ ಆರೋಪದಡಿ ಮಂಗಳೂರಿನ ಮಾಜಿ ಶಾಸಕ ಬಿ.ಎಂ ಇದಿನಬ್ಬ ಅವರ ಮಗ ಬಿ.ಎಂ ಭಾಷಾ ಅವರ ಮನೆ ಮೇಲೆ ಎನ್‍ಐಎ ತಂಡ ದಾಳಿ ಮಾಡಿದೆ.
ಬಿ.ಎಂ ಭಾಷಾ ಮಂಗಳೂರಿನ ಉಳ್ಳಾಲದ ನಿವಾಸಿಯಾಗಿದ್ದು, ಅವರಿಗೆ ಸಿರಿಯಾ ಮೂಲದ ಐಸಿಸ್ ಉಗ್ರರ ಜೊತೆ ನಂಟು ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಈ ಪರಿಣಾಮ ಇಂದು ಬೆಳಗ್ಗೆ ಬೆಂಗಳೂರಿನಿಂದ ಬಂದ ಎನ್‍ಐಎ ಅಧಿಕಾರಿಗಳ ತಂಡ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಬಿ.ಎಂ. ಭಾಷಾ ಅವರ ಪುತ್ರ ವಿದೇಶದಲ್ಲಿ ಕೆಲಸದ ಮೇಲಿದ್ದಾರೆ. ಇವರ ಕುಟುಂಬ ಸದಸ್ಯರು ಐಸಿಸ್ ಸಂಬಂಧಿಸಿದ ಯೂಟ್ಯೂಬ್ ಚಾನಲ್‍ಗಳನ್ನು ಸಬ್ ಸ್ಕ್ರೈಬ್ ಮಾಡಿ ಅವರೊಂದಿಗೆ ಮೃದು ಧೋರಣೆ ಇಟ್ಟುಕೊಂಡಿದ್ದಾರೆ ಮತ್ತು ಹಲವು ಗೌಪ್ಯ ಮಾಹಿತಿ ಹಿನ್ನೆಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಕಳೆದ 10 ವರ್ಷಗಳ ಹಿಂದೆ ಇದಿನಬ್ಬ ಅವರ ಪುತ್ರಿ ಐಸಿಸ್ ಜೊತೆ ಸಂಪರ್ಕ ಹೊಂದಿ ಕೇರಳದಿಂದ ನಾಪತ್ತೆಯಾಗಿದ್ದರು. ಕವಿ, ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಿ.ಎಂ ಇದಿನಬ್ಬ ಬಳಿಕ ರಾಜಕಾರಣಿಯಾಗಿ ಉಳ್ಳಾಲ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದರು.