ಮುಂಬೈ: ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಭಾರತದ ಪ್ರಮುಖ ರೀಟೇಲ್ ಜಾಲ ಡಿಮಾರ್ಟ್ನ ಮಾಲೀಕ ರಾಧಾಕಿಶನ್ ದಮಾನಿ ಸ್ಥಾನಪಡೆದಿದ್ದಾರೆ.
ರಾಧಾಕಿಶನ್ ದಮಾನಿ 19.2 ಬಿಲಿಯನ್ ಅಮೆರಿಕನ್ ಡಾಲರ್ (1920 ಕೋಟಿ ಅಮೆರಿಕ ಡಾಲರ್- ಭಾರತದ ರೂಪಾಯಿ ಮೌಲ್ಯದಲ್ಲಿ ಇಂದಿಗೆ 1,42,639.39 ಕೋಟಿ) ನಿವ್ವಳ ಮೌಲ್ಯದೊಂದಿಗೆ ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಒಬ್ಬ ಬಡತನದಲ್ಲಿ ಬೆಳೆದವ ಹೇಗೆ ಮೇಲೆ ಬಂದ ಎಂಬುದರ ರೋಚಕ ಕತೆಯನ್ನು ಹೇಳುತ್ತಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪಟ್ಟಿಯಲ್ಲಿ ದಮಾನಿ 98ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅವರು 117ನೇ ಸ್ಥಾನದಲ್ಲಿದ್ದರು. ಮುಕೇಶ್ ಅಂಬಾನಿ, ಗೌತಮ್ ಅದಾನಿ, ಅಜೀಂ ಪ್ರೇಮ್‌ಜಿ, ಪಲ್ಲೊಂಜಿ ಮಿಸ್ತ್ರಿ, ಶಿವ ನಾಡಾರ್ ಮತ್ತು ಲಕ್ಷ್ಮಿ ಮಿತ್ತಲ್ ಮೊದಲ 100 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿರುವ ಇತರ ಭಾರತೀಯರು.
ಬಿಲಿಯನೇರ್ ದಮಾನಿ ಅವರು ಮುಂಬೈನ ಒಂದೇ ಕೊಠಡಿಯ ಅಪಾರ್ಟ್ಮೆಂಟ್ನ ಮಾರ್ವಾಡಿ ಕುಟುಂಬದಲ್ಲಿ ಬೆಳೆದವರು. ಮುಂಬೈ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಷಯವನ್ನು ಅಧ್ಯಯನ ಮಾಡಿ, ಒಂದು ವರ್ಷದ ನಂತರ ಆ ಕೋರ್ಸ್ ಕೈಬಿಟ್ಟರು. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಅವರ ತಂದೆಯ ಮರಣದ ನಂತರ ದಮಾನಿ ತನ್ನ ಬಾಲ್ ಬೇರಿಂಗ್ ವ್ಯಾಪಾರವನ್ನು ತೊರೆದು, ಸ್ಟಾಕ್ ಮಾರ್ಕೆಟ್ ಬ್ರೋಕರ್ ಮತ್ತು ಹೂಡಿಕೆದಾರರಾದರು.
2000ನೇ ಇಸವಿಯಲ್ಲಿ ಸ್ಟಾಕ್ ಮಾರುಕಟ್ಟೆಯನ್ನು ತೊರೆದು, ತಮ್ಮದೇ ಹೈಪರ್ ಮಾರುಕಟ್ಟೆ ಜಾಲ ಡಿಮಾರ್ಟ್ ಅನ್ನು ಆರಂಭಿಸಿದರು. 2002ರಲ್ಲಿ ಪೊವೈಯಲ್ಲಿ ಮೊದಲ ಮಳಿಗೆಯನ್ನು ಸ್ಥಾಪಿಸಿದರು.
2010ರಲ್ಲಿ ಈ ಜಾಲದ 25 ಮಳಿಗೆಗಳನ್ನು ಹೊಂದಿತ್ತು. ಅದರ ನಂತರ ಕಂಪೆನಿಯು ವೇಗವಾಗಿ ಬೆಳೆಯಿತು ಮತ್ತು 2017ರಲ್ಲಿ ಕಂಪೆನಿಯ ಷೇರುಗಳನ್ನು ಸಾರ್ವಜನಿಕ ವಿತರಣೆ ಮಾಡಲಾಯಿತು.
ದಮಾನಿ ಸಾಮಾನ್ಯವಾಗಿ ಲೋ ಪ್ರೊಫೈಲ್ ಇಟ್ಟುಕೊಳ್ಳುತ್ತಾರೆ. ವಿರಳವಾಗಿಯೂ ಯಾವುದೇ ಸಂದರ್ಶನಗಳನ್ನು ನೀಡುವುದಿಲ್ಲ. ಅಂದಹಾಗೆ ಭಾರತೀಯ ಬಿಲಿಯನೇರ್ ರಾಕೇಶ್ ಜುನ್ಜುನ್ವಾಲಾಗೆ ತಮ್ಮ ಸ್ಟಾಕ್ ಟ್ರೇಡಿಂಗ್ ತಂತ್ರಗಳನ್ನು ಕಲಿಸಿದ್ದರು ರಾಧಾಕಿಶನ್ ದಮಾನಿ.