ಬೆಂಗಳೂರು: ಪತ್ರಕರ್ತೆ ಮತ್ತು ಮಾನವತಾವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಾಗಿಯಾಗಿದ್ದರು ಎನ್ನಲಾದ ಆರೋಪಿ ಮೋಹನ ನಾಯಕನಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ಆರೋಪಿ ಮೋಹನ್ ವಿರುದ್ಧ ಇದ್ದ ಕೆಲವು ಆರೋಪ ಪ್ರಕರಣಗಳನ್ನು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ರದ್ದು ಪಡಿಸಿತ್ತು. ಇದರ ವಿರುದ್ಧ ಕವಿತಾ ಲಂಕೇಶ್ ಅವರು ಸಲ್ಲಿಸಿದ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡು ವಿಚಾರಣೆ ನಡೆಸಿ ಆರೋಪಿತನಿಗೆ ನೋಟಿಸ್ ಜಾರಿಗೊಳಿಸಿದೆ.
ಪತ್ರಕರ್ತೆ ಮತ್ತು ಮಾನವತಾವಾದಿ ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಆರೋಪಿಗಳಲ್ಲಿ ಮೋಹನ ನಾಯಕ್ ಆರನೇ ಆರೋಪಿಯಾಗಿದ್ದ. ಆತನ ಮೇಲೆ ಕೊಲೆಗೆ ಸಹಕರಿಸಿದ ಆಪಾದನೆಗಳ ಜೊತೆಗೆ ಕರ್ನಾಟಕ ಸಂಘಟಿತ ಅಪರಾಧಗಳ ಕಾಯ್ದೆಯಡಿಯ ಕಲಂ ಅಡಿಯೂ ದೋಷಾರೋಪಣೆ ಮಾಡಲಾಗಿತ್ತು.
ಅದನ್ನು ಆತ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಹೈಕೋರ್ಟ್ ಆತನ ಮೇಲಿದ್ದ ಆರೋಪಗಳನ್ನು ರದ್ದುಪಡಿಸಿತ್ತು. ಇದೀಗ ಪ್ರಕರಣದ ದೂರುದಾರರಾದ ಕವಿತಾ ಲಂಕೇಶ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5 ರಂದು ಅವರ ಮನೆ ಬಳಿಯೇ ಬೈಕ್ ಬಂದ ಇಬ್ಬರು ಹತ್ಯೆ ಮಾಡಿ ಪರಾರಿಯಾಗಿದ್ದರು.