ವಿಜಯಪಥ ಸಮಗ್ರ ಸುದ್ದಿ
ಜೇವರ್ಗಿ: ತಾಲೂಕಿನ ನರಿಬೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜವಾಳ ಗ್ರಾಮದಲ್ಲಿ ರಾಜ್ಯ ಸರ್ಕಾರದ ಬಹು ನಿರೀಕ್ಷಿತ ‘ಹಳ್ಳಿಗಳತ್ತ ಜಿಲ್ಲಾಧಿಕಾರಿಗಳ ಚಿತ್ತ’ ಕಾರ್ಯಕ್ರಮ ಇಂದು ಆರಂಭವಾಗಿದೆ.
ಕಂದಾಯ ಇಲಾಖೆಯ ಸೌಲಭ್ಯಗಳು ಗ್ರಾಮೀಣ ಭಾಗದ ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭಿಸಿದ್ದು, ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರರು ಸೇರಿ ಇಡೀ ಆಡಳಿತ ಯಂತ್ರವೇ ಹಳ್ಳಿಗಳಿಗೆ ತೆರಳಿ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ದೊರಕಿಸಲು ನಿಂತಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ಜೇವರ್ಗಿ ತಹಸೀಲ್ದಾರ್ ಸಿದ್ದರಾಯ ಬೋಸಗಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ತೆರಳಲಿರುವ ಅಧಿಕಾರಿಗಳ ತಂಡ ಸಂಜೆ 5 ರವರೆಗೆ ಗ್ರಾಮಸ್ಥರ ಕುಂದು ಕೊರತೆ ಆಲಿಸಲಿದೆ. ರಾತ್ರಿ ಅದೇ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಗ್ರಾಮಸ್ಥರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಸ್ಥಳದಲ್ಲಿಯೇ ಪರಿಹಾರ ಕೊಡಲಿದ್ದಾರೆ.
ಗ್ರಾಮಗಳ ಪ್ರಮುಖ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ವಿಶೇಷವಾಗಿ ರೈತಾಪಿ ವರ್ಗದ ಪಹಣಿ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನೆರೆ ಪ್ರವಾಹದ ಪರಿಹಾರ ಸೇರಿ ಅನೇಕ ಸಮಸ್ಯೆ ಮತ್ತು ದೂರಿಗಳಿಗೆ ಸ್ಥಳದಲ್ಲಿಯೇ ಸ್ಪಂದಿಸುವ ಕಾರ್ಯಕ್ರಮ ಇದಾಗಿದ್ದು ಆದಷ್ಟು ಪರಿಹಾರ ನೀಡಲಾಗುವುದು ಎಂದು ತಹಸೀಲ್ದಾರ್ ಸಿದ್ದರಾಯ ಬೋಸಗಿ ತಿಳಿಸಿದ್ದಾರೆ.