ವಿಜಯಪಥ ಸಮಗ್ರ ಸುದ್ದಿ
ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ವಿವಿಧ ಹಳ್ಳಿಗಳಿಗೆ ಬಸ್‌ಗಳ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಐಡಿಎಸ್ಒ ಸಂಘಟನೆಯ ಮುಂದಾಳತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗುರುವಾರ ಜೇವರ್ಗಿ ಪಟ್ಟಣದಲ್ಲಿ ಎಐಡಿಎಸ್ಒ ಸಂಘಟನೆ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪಟ್ಟಣದ ವಿಜಯಪುರ ಕ್ರಾಸ್‌ನಲ್ಲಿ ಸಮವೇಶಗೊಂಡು ಬಸ್ ನಿಲ್ದಾಣದವರೆಗೆ ಪಾದಯಾತ್ರೆ ಮುಖಾಂತರ ಮೆರವಣಿಗೆ ನಡೆಸಿ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಕೊರೊನಾ ಸಮಯದಲ್ಲಿ ತಾಲೂಕಿನ ವಿವಿಧ ಹಳ್ಳಿಗಳಿಗೆ ನಿಲ್ಲಿಸಿರುವ ಬಸ್‌ಗಳನ್ನು ಮತ್ತೆ ರೂಟ್‌ಮೇಲೆ ಬಿಡಬೇಕು ಎಂದು ಮನವಿ ಮಾಡಿದರು.
ಸಮಯಕ್ಕೆ ಸರಿಯಾಗಿ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ. ಇನ್ನು ಖಾಸಗಿ ವಾಹನಗಳ ಮೂಲಕ ತಾಲೂಕು ಕೇಂದ್ರಕ್ಕೆ ಬರಬೇಕಾದರೆ ಹೆಚ್ಚುವರಿ ಹಣ ನೀಡಬೇಕಿದೆ. ಜತೆಗೆ ಬೇಕಾಬಿಟ್ಟಿಯಾಗಿ ಜನರನ್ನು ಹತ್ತಿಸಿಕೊಂಡು ಕರೆದೊಯ್ಯುತ್ತಿದ್ದಾರೆ.
ಈ ಮೂಲಕ ಪ್ರಯಾಣಿಕರ ಜೀವದ ಜತೆ ಚಲ್ಲಾಟವಾಡುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹಳ್ಳಿಗಳಿಗೆ ಸೂಕ್ತ ಬಸ್ ಸಂಚಾರ ವ್ಯವಸ್ಥೆ ಮಾಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಂದ ಮನವಿ ಪತ್ರ ಸ್ವೀಕರಿಸಿದ ಘಟಕ ವ್ಯವಸ್ಥಾಪಕರು ಕೂಡಲೇ ಹಳ್ಳಿಗಳಿಗೆ ಬಸ್‌ಗಳ ವ್ಯವಸ್ಥೆ ಮಾಡುತ್ತೇವೆಂದು ಭರವಸೆ ನೀಡಿದರು.
l ವರದಿ ಮಲ್ಲಿಕಾರ್ಜುನ ಎಸ್. ಬಿರಾದಾರ