ಮಡಿಕೇರಿ: 2018ರ ಆಗಸ್ಟ್‍ನಲ್ಲಿ ಸುರಿದ ಧಾರಾಕಾರ ಮಳೆಗೆ ಸಂತ್ರಸ್ತರಾದ ಕುಟುಂಬಗಳಿಗೆ ಈಗಾಗಲೇ ಕರ್ಣಂಗೇರಿಯಲ್ಲಿ 35 ಮನೆ, ಜಂಬೂರು 383 ಮತ್ತು ಮದೆ ಗ್ರಾಮದ ಬಳಿ 80 ಒಟ್ಟು 498 ಮನೆಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದ್ದು, ಉಳಿದಂತೆ ಬಿಳಿಗೇರಿ ಬಳಿ 22 ಮನೆ, ಗಾಳಿಬೀಡು ಬಳಿ 140 ಮತ್ತು ಕೆ.ನಿಡುಗಣೆ ಬಳಿ 80 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈ 242 ಮನೆಗಳನ್ನು 6-7 ತಿಂಗಳಲ್ಲಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವಬವಿ.ಸೋಮಣ್ಣ ತಿಳಿಸಿದ್ದಾರೆ.
ಜಿಲ್ಲಾಡಳಿತ, ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಪುನರ್ವಸತಿ ಯೋಜನೆ ಅಡಿಯಲ್ಲಿ 2018 ರ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ಹಕ್ಕು ಪತ್ರ ಹಾಗೂ ಕೀ ಯನ್ನು ಗುರುವಾರ ವಿತರಿಸಿ ಅವರು ಮಾತನಾಡಿದರು.
ಇನ್ಫೋಸಿಸ್ ವತಿಯಿಂದ ಸಹ 250 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಅದನ್ನು ಹಸ್ತಾಂತರಿಸಲಾಗುವುದು ಎಂದ ಸಚಿವರು, ಸರ್ಕಾರ ಪ್ರತಿ ಮನೆಗೆ 9.85 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿದ್ದು, ಇದು ರಾಜ್ಯಕ್ಕೆ ಮಾದರಿಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮನೆ ಮಾರಿಕೊಳ್ಳಬಾರದು ಎಂದು ಕೋರಿದರು.
ಎಚ್.ಡಿ.ಕುಮಾರಸ್ವಾಮಿ ಕಾಲದಲ್ಲಿ ನಿರ್ಮಾಣಕ್ಕೆ ಚಾಲನೆ
ಕೊಡಗಿನಲ್ಲಿ ಮಳೆ ಬಂದರೆ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಅರಿತು 2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗುತ್ತದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕಿವಿಮಾತು ಹೇಳಿದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ಜಂಬೂರಿನಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಪ್ರಕೃತಿ ವಿಕೋಪ ಚಟುವಟಿಕೆಗೆ ಸುಸಜ್ಜಿತ ಭವನ ನಿರ್ಮಿಸಲಾಗುವುದು ಎಂದು ಪ್ರಕಟಿಸಿದರು.
ಕೊಡಗು ಜಿಲ್ಲೆಯಲ್ಲಿ ಭೂ ಪರಿವರ್ತನೆ ಸಂಬಂಧಿಸಿದಂತೆ ಕೆಲವು ಷರತ್ತುಗಳನ್ನು ವಿಧಿಸಿ ಹೊಸ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
2019 ರಲ್ಲಿ ಸುರಿದ ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ವೆಚ್ಚದಲ್ಲಿ 5 ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಬಡವರಿಗೆ ಮನೆ ನಿರ್ಮಿಸಿಕೊಡಲು ಹಣದ ಕೊರತೆಯಿಲ್ಲ ಎಂದು ಕಂದಾಯ ಸಚಿವರು ಹೇಳಿದರು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಭೂ ಪರಿವರ್ತನೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಗೆ ಒಳಿತಾಗುವ ಷರತ್ತುಗಳನ್ನು ಹಾಕಿರಬೇಕು. ಇಲ್ಲದಿದ್ದಲ್ಲಿ ಕೊಕ್ಕೆ ಹಾಕಿದರೆ ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಆದೇಶ ಓದಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಂಬೂರು, ಮದೆ ಅಥವಾ ಇತರೆ ಭಾಗಗಳಲ್ಲಿ ಮಳೆಗಾಲದಲ್ಲಿ ಮಾತ್ರ ವಾಸ ಮಾಡುತ್ತೇವೆ ಎಂಬುದನ್ನು ಬಿಟ್ಟು, ಎಲ್ಲಾ ಕಾಲದಲ್ಲಿಯೂ ವಾಸ ಮಾಡಬೇಕು. ಮನೆಯನ್ನು ಬಳಸಿಕೊಂಡು ಅಭಿವೃದ್ಧಿಯತ್ತ ಚಿಂತಿಸಬೇಕು ಎಂದು ಸಲಹೆ ಮಾಡಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ 2018 ರಲ್ಲಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ಭಾಗದಲ್ಲಿ ಸಂಕಷ್ಟ ಎದುರಾಯಿತು. ಹಲವು ಕುಟುಂಬಗಳು ಮನೆ ಮಠ ಕಳೆದುಕೊಂಡರು. ಇವರಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗಿದೆ ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರು ವಸತಿ ಸಚಿವರಾಗಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ಇವರ ಕಾರ್ಯ ಮೈಸೂರು ಭಾಗದಲ್ಲಿ ಜನಮನ್ನಣೆ ಗಳಿಸಿದೆ ಎಂದು ಕೊಂಡಾಡಿದರು.
ಸರ್ಕಾರವು ಕೊಡಗಿನಲ್ಲಿ ಅತಿವೃಷ್ಠಿಯಿಂದ ಮನೆ ಕಳೆದುಕೊಂಡವರಿಗೆ ಜಂಬೂರು ಮತ್ತು ಮದೆಯಲ್ಲಿ ಮನೆ ನಿರ್ಮಾಣಕ್ಕೆ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಾ.ರಾ.ಮಹೇಶ್ ಅವರು ಮನೆ ನಿರ್ಮಾಣಕ್ಕೆ ಚಾಲನೆ ನೀಡಿದರು ಎಂದು ಅವರು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಟಿ.ವಿ 9 ವಾಹಿನಿ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ(ಎಚ್.ಪಿ) ವತಿಯಿಂದ ಹೊಸ ಮನೆ ಪ್ರವೇಶಿಸಿದ ಸಂತ್ರಸ್ತರಿಗೆ ಉಚಿತ ಅಡುಗೆ ಅನಿಲ ಸ್ಟೌ ವಿತರಿಸಲಾಯಿತು.
ಮನೆ ನಿರ್ಮಾಣಕ್ಕೆ ಶ್ರಮಿಸಿದ ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ರಾಜೀವ್ ಗಾಂಧೀ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿ.ರಾಮ್ ಪ್ರಸಾಥ್ ಮನೋಹರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ ಸಿಇಒ ಕೆ.ಲಕ್ಷ್ಮೀಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಹಾಗೂ ಹಿಂದಿನ ಜಿಲ್ಲಾ ಪುನರ್ವಸತಿ ವಿಭಾಗದ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ರಾಜೀವ್ ಗಾಂಧೀ ವಸತಿ ನಿಗಮದ ಯೋಜನಾ ನಿರ್ದೇಶಕರಾದ ಎಚ್.ಶ್ರೀನಿವಾಸ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ.ಅಧ್ಯಕ್ಷ ಬಿ.ಎ ಹರೀಶ್, ಸದಸ್ಯರಾದ ಚಂದ್ರಕಲಾ, ಕುಮುದಾ, ಸೋಮವಾರಪೇಟೆ ತಾ.ಪಂ.ಅಧ್ಯಕ್ಷರಾದ ಪುಷ್ಪರಾಜ್, ಮಡಿಕೇರಿ ತಾ.ಪಂ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್, ಮಾದಾಪುರ ಗ್ರಾ.ಪಂ.ಅಧ್ಯಕ್ಷರಾದ ಲತಾ, ಮದೆ ಗ್ರಾ.ಪಂ.ಅಧ್ಯಕ್ಷರಾದ ಎಂ.ಬಿ ಚಂದ್ರಶೇಖರ್, ವಸತಿ ಇಲಾಖೆ ಕಾರ್ಯದರ್ಶಿ, ಮನೋಜ್ ಕುಮಾರ್ ಮೀನಾ, ರಾಜೀವ್ ಗಾಂಧೀ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿ.ರಾಮ್ ಪ್ರಸಾಥ್ ಮನೋಹರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ ಸಿಇಒ ಕೆ.ಲಕ್ಷ್ಮೀಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಹಾಗೂ ಹಿಂದಿನ ಜಿಲ್ಲಾ ಪುನರ್ವಸತಿ ವಿಭಾಗದ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ರಾಜೀವ್ ಗಾಂಧೀ ವಸತಿ ನಿಗಮದ ಯೋಜನಾ ನಿರ್ದೇಶಕರಾದ ಎಚ್.ಶ್ರೀನಿವಾಸ್ ಇತರರು ಇದ್ದರು.