ತಿ.ನರಸೀಪುರ: ಇಂದು ಆಷಾಢ ಮಾಸದ ಕೊನೆಯ ದಿನ. ಆಷಾಢ ಮಾಸದ ಅಮಾವಾಸ್ಯೆ ಅಷ್ಟೇ ಅಲ್ಲದೇ ಭೀಮನ ಅಮಾವಾಸ್ಯೆ ಕೂಡ ಆಗಿರುವುದರಿಂದ ತಾಲೂಕಿನ ಬನ್ನೂರಿನಲ್ಲಿ ಶ್ರೀ ಕರಿಯಪ್ಪ ಸ್ವಾಮಿ ಗದ್ದುಗೆಯ ದರ್ಶನ ಪಡೆಯಲು ಸಾವಿರಾರು ಮಂದಿ ಆಗಮಿಸುತ್ತಿದ್ದರು. ಆದರೆ ಈ ವರ್ಷ ಕೊರೊನಾ ಮಹಮಾರಿಯಿಂದ ಗದ್ದುಗೆ ದರ್ಶನಕ್ಕೆ ತಾಲೂಕು ಆಡಳಿತ ಅವಕಾಶ ನೀಡಿಲ್ಲ.
ಹೀಗಾಗಿ ಪ್ರತಿ ವರ್ಷ ಬರುತ್ತಿದ್ದ ಭಕ್ತರಿಗೆ ನಿರಾಸೆಯಾಗಿದ್ದು, ನವ ಜೋಡಿಗಳಲ್ಲೂ ಬೇಸರ ತರಿಸಿದೆ.
ಇನ್ನು ಆಷಾಢ ಮಾಸದ ಭೀಮನ ಅಮಾವಾಸ್ಯೆ ದಿನ ಶಕ್ತಿ ದೇವತೆಗಳ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಈ ಹಿನ್ನೆಲೆ ರಾಜ್ಯದ ವಿವಿಧ ದೇವಾಲಯಗಳಲ್ಲಿ ಶಕ್ತಿ ದೇವತೆಗಳ ದೇವಾಲಯಕ್ಕೆ ಭಕ್ತರ ಸಾಗರವೇ ಹರಿದು ಬರುತ್ತಿದೆ.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಾಲಯಕ್ಕೂ ಭಕ್ತ ಸಾಗರವೇ ಹರಿದು ಬಂದಿದ್ದು, ಗಾಳಿ ಆಂಜನೇಯ ಸ್ವಾಮಿಯ ದರ್ಶನ ಪಡೆಯಲು ಜನ ಮುಗಿ ಬೀಳುತ್ತಿದ್ದಾರೆ. ಒಂದೂವರೆ ಕಿ.ಮೀಗೂ ಹೆಚ್ಚು ದೂರ ಭಕ್ತರು ಸಾಲು ಗಟ್ಟಿ ನಿಂತಿದ್ದಾರೆ. ಪೋಷಕರು ದೇವಾಲಯಕ್ಕೆ ಚಿಕ್ಕ, ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದು ಕೊರೊನಾ ರೂಲ್ಸ್ ಗಳನ್ನು ಬ್ರೇಕ್ ಮಾಡುತ್ತಿದ್ದಾರೆ.
ಬೃಂದಾವನನಗರದ ಶ್ರೀ ಬಂಡೆಮಹಾಂಕಾಳಿ ದೇವಾಲಯಕ್ಕೆ ಭಕ್ತರು ಆಗಮಿಸಿ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ. ಮತ್ತೊಂದೆಡೆ ನಗರದ ಅಣ್ಣಮ್ಮ ತಾಯಿ ದೇವಾಲಯ, ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿಯೂ ಭಕ್ತರು ಜಮಾಯಿಸಿದ್ದಾರೆ. ಆದರೆ, ಸಾಮಾಜಿಕ ಅಂತರ ಪರಿಪಾಲನೆ ಆಗುತ್ತಿಲ್ಲ. ಜನ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ದೇವಿಯ ದರ್ಶನಕ್ಕೆ ಮುಗಿಬಿದ್ದಿದ್ದಾರೆ.
ನಗರದ ಪ್ರಸಿದ್ಧ ಬನಶಂಕರಿ ದೇವಾಲಯದಲ್ಲಿ ಮಕ್ಕಳು, ವಯಸ್ಸಾದವರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜಾತ್ರೆಯಂತೆ ಜನ ತುಂಬಿದ್ದಾರೆ. ಅಲ್ಲದೇ ದೇವಾಲಯದ ಸಿಬ್ಬಂದಿ ಕೊರೊನಾ ನಿಯಮಗಳನ್ನು ಪಾಲಿಸಿ ಅಂತ ಮೈಕ್‍ನಲ್ಲಿ ಸಾರಿ ಸಾರಿ ಹೇಳುತ್ತಿದ್ದರೂ ಜನ ಮಾತ್ರ ಅತ್ತಕಡೆ ಕಿವಿಗೊಡುತ್ತಿಲ್ಲ.