ಬೆಂಗಳೂರು: ನಗರದಲ್ಲಿ ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮೊದಲನೇ ಹಂತದಲ್ಲಿ 27 ವಿಧಾನಸಭಾ ಕ್ಷೇತ್ರಗಳ 54 ವಾರ್ಡ್ಗಳಲ್ಲಿ ಹಮ್ಮಿಕೊಳ್ಳಲಾಗಿದೆ. ನಗರದ 29 ಲಕ್ಷ ಮನೆಗಳಿಗೂ ಭೇಟಿನೀಡಿ ಆರೋಗ್ಯ ತಪಾಸಣೆ ನಡೆಸುವುದು ಪಾಲಿಕೆಯ ಗುರಿಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ರವರು ತಿಳಿಸಿದರು.
‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ’ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರ ತಂಡವು ಪ್ರತಿ ಮನೆಗೂ ಭೇಟಿ ನೀಡಿ ಆರೋಗ್ಯ ವಿಚಾರಿಸುವುದು, ಮನೆಯಲ್ಲಿ ಎಷ್ಟು ಮಂದಿ ವಾಸವಿದ್ದಾರೆ, ಎಷ್ಟು ಮಂದಿಗೆ ಲಸಿಕೆ ನೀಡಲಾಗಿದೆ, ಮೊದಲ ಲಸಿಕೆ ಹಾಗೂ ಎರಡನೇ ಲಸಿಕೆ ಪಡೆದಿರುವ ಬಗ್ಗೆ, ಕ್ಯಾನ್ಸರ್, ಬಿಪಿ, ಸಕ್ಕರೆ ಕಾಯಿಲೆ ಸೇರಿದಂತೆ ಇನ್ನಿತರೆ ರೋಗಗಳಿರುವ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದರು.
ಇನ್ನು ಕೋವಿಡ್ ಇರುವ ಸಂದರ್ಭದಲ್ಲಿ ಕೋವಿಡ್ ಸೋಂಕು ಇರುವವರನ್ನು ಕಂಡುಹಿಡಿಯುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ನಂತರ ನಗರದಲ್ಲಿ ಕೋವಿಡ್ ನಿಯಂತ್ರಿಸುವ ಸಂಬಂಧ ನಾಗರಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸುಬೇಕು. ಅದಕ್ಕಾಗಿ ಎಲ್ಲಾ ಮನೆಗೂ ಕೋವಿಡ್ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ನೀಡಲಾಗುತ್ತದೆ ಎಂದರು.
ಪ್ರತೀ ತಂಡವು ಪ್ರತಿನಿತ್ಯ ಕನಿಷ್ಠ 50 ಮನೆಗಳ ಸಮೀಕ್ಷೆ ನಡೆಸಲಿದೆ. ಅದಕ್ಕಾಗಿ ಪ್ರತೀ ವಾರ್ಡ್ ಗೆ 5 ವೈದ್ಯರ ತಂಡವಿರಲಿದ್ದು, ಆ ತಂಡದಲ್ಲಿ ಒಬ್ಬ ವೈದ್ಯಾಧಿಕಾರಿ(ಎಂ.ಬಿ.ಬಿ.ಎಸ್/ಬಿ.ಡಿ.ಎಸ್/ಆಯುಷ್) ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನೊಳಗೊಂಡ ತಂಡ ಇರಲಿದೆ. ಪ್ರತೀ ತಂಡದ ವೈದ್ಯಾಧಿಕಾರಿಗಳು ‘ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ, ನಿಮ್ಮ ಆರೋಗ್ಯವೇ ನಮ್ಮ ಧ್ಯೇಯ’ ಎಂಬ ಘೋಷಣೆಯನ್ನು ಮುದ್ರಿಸಿರುವ ಬಿಳಿ ಬಣ್ಣದ ಏಪ್ರಾನ್‌ನ್ನು ಧರಿಸಿರುತ್ತಾರೆ.
ಸಮೀಕ್ಷಾ ಕಾರ್ಯಕ್ಕಾಗಿ ಮನೆ-ಮನೆಗೆ ತಂಡಗಳು ಭೇಟಿ ನಿಡಲು ವಾಹನಗಳ ನಿಯೋಜನೆ ಮಾಡಲಾಗಿದೆ. ಮನೆ ಭೇಟಿಯ ಸಮಯದಲ್ಲಿ ಕೋವಿಡ್-19 ಸೋಂಕಿತರು ಪತ್ತೆಯಾದಲ್ಲಿ, ಸದರಿ ಸೋಂಕಿತರಿಗೆ, ಹೋಂ ಐಸೋಲೇಷನ್ ಕಿಟ್ ಅನ್ನು ನೀಡಲಾಗುತ್ತದೆ. ಜೊತೆಗೆ ಪ್ರತಿ ಮನೆ, ಕೊಳಗೇರಿ ಪ್ರದೇಶ ಬೇಟಿ ನೀಡಿದ ವೇಳೆ ಸಾಂತ್ವಾನ ಹಾಗೂ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಮನೆ-ಮನೆ ಭೇಟಿ ನೀಡುವ ಸಮೀಕ್ಷಾ ಕಾರ್ಯದಲ್ಲಿ ಪಡೆದ ಮಾಹಿತಿಯನ್ನು ಕಾಗದ ಬಳಕೆಮಾಡದೆ(ಪೇಪರ್ ಲೆಸ್) ಪ್ರತೀ ದಿನ ನಿಗದಿತ ಬಿಬಿಎಂಪಿ ತಂತ್ರಾಂಶದಲ್ಲಿ ನಮೂದಿಸಲು ವೈದ್ಯರ ತಂಡಕ್ಕೆ ಸೂಚಿಸಲಾಗಿದೆ.
ನಗರದಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ದೃಷ್ಟಿಯಿಂದ ಈ ಸಮೀಕ್ಷಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಕೋವಿಡ್ ಸೋಂಕು ಕಂಡುಬಂದವೇಳೆ ಹಾಸಿಗೆ, ಆಂಬುಲೆನ್ಸ್, ಔಷಧ ಹುಡುಕಾಟ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಬಹುದಾಗಿದ್ದು, ಕೊರೋನ ತಡೆಗಟ್ಟಲು ದಿಟ್ಟ ಹೆಜ್ಜೆ ಇಡಲಾಗಿದೆ ಎಂದು ತಿಳಿಸಿದರು.
ಶಾಸಕ ರಿಜ್ವಾನ್ ಹರ್ಷದ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿಸಿದ್ದು, ಈ ಮೂಲಕ ನೇರವಾಗಿ ಮನೆ ಮನೆ ಭೇಟಿ ಮಾಡಿ ಮಾತನಾಡುವುದರಿಂದ ಪಾಲಿಕೆಗೆ ಅಗತ್ಯ ಮಾಹಿತಿ ಲಬ್ಯವಾಗಲಿದೆ. ಇದರಿಂದ ಕೋವಿಡ್ ನಿಯಂತ್ರಿಸಲು ಸಹಕಾರಿಯಾಗಲಿದೆ. ಇದನ್ನು ಇಡೀ ನಗರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾದರೆ ಒಂದು ಮೈಲಿಗಲ್ಲಾಗಲಿದೆ ಎಂದು ತಿಳಸಿದರು.
ಪಿ.ಎಚ್.ಎ.ಸಿ.ಟಿ(PHAST) ತಂತ್ರಾಂಶದ ಮೂಲಕ ಮಾಹಿತಿ ಸಂಗ್ರಹ: Public Health Activities, Surveillance and Tracking(PHAST ಎಂಬ ತಂತ್ರಾಂಶದಲ್ಲಿ ವೈದ್ಯರ ತಂಡವು ಪ್ರತಿ ಮನೆ-ಮನೆಗೆ ಭೇಟಿ ನೀಡಿ ಸಂಗ್ರಹಿಸಿ ಮಾಹಿತಿಯನ್ನು ನಮೂದಿಸಲಾಗುವುದು.
ವೈದ್ಯರ ತಂಡವು ಮನೆಗೆ ಭೇಟಿ ನೀಡಿದ ವೇಳೆ ತಂತ್ರಾಂಶದಲ್ಲಿ ಕುಟುಂಬದ ಮೂಖ್ಯಸ್ಥರು ಹೆಸರು, ಮನೆಯ ವಿಳಾಸ, ಮನೆಯ ದೂರವಾಣಿ ಸಂಖ್ಯೆ, ಮನೆಯಲ್ಲಿ ವಾಸವಿರುವವರ ವಿವರ, ಮನೆಯಲ್ಲಿರುವವರ ವಯಸ್ಸು, ಕೋವಿಡ್ ಹಾಗೂ ಇನ್ನಿತರ ಕೋಮಾರ್ಬಿಟ್ ಬಗೆಗಿನ ಮಾಹಿತಿ, ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.
ಈ ವೇಳೆ ಆಡಳಿತಗಾರರು ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ, ವಿಶೇಷ ಆಯುಕ್ತರಾದ ಡಿ.ರಂದೀಪ್, ತುಳಸಿ ಮದ್ದಿನೇನಿ, ಹರೀಶ್ ಕುಮಾರ್, ಮನೋಜ್ ಜೈನ್, ದಯಾನಂದ್, ರವೀಂದ್ರ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.