ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಾಗ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿರುತ್ತಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಮದ್ದೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾ ಹಣದಿಂದ ಮೈತ್ರಿ ಸರ್ಕಾರ ಪತನವಾಯಿತು ಎಂದು ಆರೋಪಿಸಿರುವ ಕುಮಾರಸ್ವಾಮಿ ಅವರು ಸಂದರ್ಭಕ್ಕೆ ತಕ್ಕಂತೆ ಮಾತನಾಡಿ ಜನರನ್ನು ಯಾಮಾರಿಸುವ ಕಲೆಯನ್ನು ಕರಗತಮಾಡಿಕೊಂಡಿದ್ದಾರೆ ಎಂದರು.
ಇನ್ನು ಮುಖ್ಯಮಂತ್ರಿಯಾಗಿದ್ದವರು ಅವರು, ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಎಚ್‌ಡಿಕೆಗೆ ಸಲಹೆ ನೀಡಿದ್ದು, ಈ ರೀತಿ ಆರೋಪಿಸುತ್ತಿರುವವರು ಒಂದು ವರ್ಷ ಸುಮ್ಮನಿದ್ದದ್ದು ಏಕೆ? ಡ್ರಗ್ಸ್ ವಿಚಾರ ಸುದ್ದಿಯಲ್ಲಿರುವ ಈ ಸಂದರ್ಭದಲ್ಲಿ ಅವರು ಆರೋಪಿಸುತ್ತಿದ್ದಾರೆ. ಮೈತ್ರಿ ಸರ್ಕಾರದ ಮಂಪರಿನಿಂದ ಹೊರಬರಲು ಕುಮಾರಸ್ವಾಮಿ ಅವರಿಗೆ ಒಂದು ವರ್ಷ ಬೇಕಾಯಿತೇ? ಮೈತ್ರಿ ಸರ್ಕಾರ ಇದ್ದಾಗ ಏಕೆ ಹೇಳಲಿಲ್ಲ ಎಂದು ಕಾಲೆಳೆದರು.
ಇನ್ನು ವಿಪಕ್ಷಗಳ ಊಹಾಪೋಹದ ಆರೋಪಗಳಿಗೆಲ್ಲ ಉತ್ತರಿಸಬೇಕಾಗಿಲ್ಲ. ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡವರು ಯಾರೇ ಇರಲಿ ಸರ್ಕಾರ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ತಾವು ಮೈಸೂರಿಗೆ ಭೇಟಿ ನೀಡುತ್ತಿರುವುದು ಕೃಷಿ ಅಧಿಕಾರಿಗಳ ಜತೆ ಸಭೆ ನಡೆಸುವುದಕ್ಕಾಗಿ. ರಸಗೊಬ್ಬರವಾಗಲಿ, ಯೂರಿಯಾದ ಕೊರತೆಯಾಗಲಿ ಇಲ್ಲ. ಕೆಲವೆಡೆ ಕೃತಕ ಅಭಾವ ಸೃಷ್ಟಿಯಾಗುತ್ತಿದೆ. ಈ ಮಾಡುವವರ ವಿರುದ್ಧ ಕ್ರಮ ಜರುಗಿಸಿ ಪರವಾನಗಿ ರದ್ದು ಮಾಡಲಾಗುತ್ತಿದೆ ಎಂದು ತಿಳಿಸಿದರು.
ರೈತರಿಗಾಗಲಿ ಕೃಷಿ ಚಟುವಟಿಕೆಗಾಗಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಕಳೆದ ಬಾರಿಗಿಂತಲೂ ಈ ಬಾರಿ ರಾಜ್ಯದಲ್ಲಿ ಹೆಚ್ಚು ಬಿತ್ತನೆಯಾಗಿದೆ. ಮಂಡ್ಯ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಎಲ್ಲ ಜಿಲ್ಲೆಗಳ ಕೃಷಿ ಅಧಿಕಾರಿಗಳ ಜತೆಗೂ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾಹಿತಿ ಪಡೆಯಲಾಗುವುದು ಎಂದು ಹೇಳಿದರು.
Neenu bahala saacha nodappa