- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಒಬ್ಬ ನಾಲಾಯಕ್ ಮಂತ್ರಿ ಎಂದು ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ, ಜನರ ಬಗ್ಗೆಯೂ ಕಾಳಜಿ ಇಲ್ಲ ಸರ್ಕಾರ ಮತ್ತು ಶಾಸಕರು ವ್ಯಾಪಾರಕ್ಕೆ ಕೂತಿದ್ದಾರೆ, ನಾವು ನೋಡುತ್ತಿದ್ದೇವೆ. ಇವರಿಗೆ ಮಾತ್ರ ರಾತ್ರಿ ಓಡಾಡಿ ರೂಢಿ ಎಂದು ಕಿಡಿಕಾರಿದರು. ಶ್ರೀರಾಮುಲು ಅವರನ್ನು ಮುಗಿಸಿದವರು ಸುಧಾಕರ್. ಅವರು ಏನು ಮಾಡಿದರೂ ನಡೆಯುತ್ತೆ ಎನ್ನುವಂತಾಗಿದೆ. ಲಸಿಕೆ ಬಂದಿದೆ ಅಂದ್ಮೇಲೆ ಎರಡನೇ ವೈರಸ್ ಹೇಗೆ ಬರುತ್ತೆ? ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದಂತ ನಾಲಾಯಕ್ ಮಂತ್ರಿ ಇವರು ಎಂದು ಸುಧಾಕರ್ ವಿರುದ್ಧ ಹರಿಹಾಯ್ದರು.
ಸುಧಾಕರ್ ಅವರು ರಾಜರು, ನಾವು ಪ್ರಜೆಗಳು ಎನ್ನುವ ತರ ಆಗಿದೆ. ಸುಧಾಕರ್‌ಗೆ ಮೊದಲು ಶ್ರೀರಾಮುಲು ನಂತರ ಸಿಎಂ ಜತೆ ಹೊಂದಾಣಿಕೆ ಇರಲಿಲ್ಲ, ಉಸ್ತುವಾರಿ ಸಚಿವರ ಜತೆಗೂ ಹೊಂದಾಣಿಕೆ ಇರಲಿಲ್ಲ. ಆಮೇಲೆ ಎರಡೂ ಖಾತೆ ಮರ್ಜ್ ಮಾಡಿಸಿಕೊಂಡು ಸುಮ್ಮನೆ ಕೂತಿದ್ದಾರೆ. ಮೋಜಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಏನ್ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂಬುವುದು ಅವರಿಗೇ ಗೊತ್ತಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವಿಪಕ್ಷಗಳ ಜತೆ ಯಾವ ರೀತಿ ಸಹಕಾರ ಕೇಳಬೇಕು ಎನ್ನುವುದೇ ಗೊತ್ತಿಲ್ಲ. ಇವರು ಏಕ ಚಕ್ರಾಧಿಪತ್ಯ ನಡೆಸುತ್ತಿದ್ದಾರೆ. ಎಲ್ಲ ರೀತಿಯ ಸಹಕಾರ ನಾವು ನೀಡಿದ್ದೇವೆ. ಇವರ ಹಗರಣಗಳನ್ನು ಎತ್ತಿ ತೋರಿಸಲಿಲ್ಲ ಅಂದ್ರೆ, ಇವರಿಗೆ ನಾವು ಒಳ್ಳೆಯವರು. ಹಗರಣದ ವಿಚಾರ ತೆಗೆದರೆ ಇವರಿಗೆ ನಾವು ಒಳ್ಳೆಯವರಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಚರ್ಚೆಗೆ ಬರಲಿ ಬೇಕಿದ್ರೆ, ಸಹಕಾರ ಕೊಟ್ಟಿದ್ದೀವಾ ಇಲ್ವಾ ಅಂತ. ಸರ್ವ ಪಕ್ಷ ಸಭೆ ಕರಿತಾರೆ, ಸಲಹೆ ಕೊಟ್ಟರೆ ಅದನ್ನು ಪಾಲನೆ ಮಾಡಲ್ಲ. ಬರೀ ಫೋಟೋಗೆ ಪೋಸ್ ಕೊಡೋಕೆ ಸಭೆ ಕರಿತಾರೆ. ವಿಪಕ್ಷಗಳು ಇವರ ಒಳ ರಾಜಕೀಯ ನೋಡ್ಕೊಂಡು ಕೂರಬೇಕಾ? ಬಿಜೆಪಿಯವರಿಗೆ ನೈತಿಕತೆಯೇ ಇಲ್ಲ. ಮಾನಸಿಕ ಅಸ್ತಿತ್ವ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಶಿಕ್ಷಣ ಸಚಿವರು ಶಾಲೆ ಕಾಲೇಜು ಚಿಂತನೆ ಅಂತಾರೆ. ನ್ಯಾಷನಲ್ ನವರು ಇನ್ನೂ ನಿರ್ಧಾರವಾಗಿಲ್ಲ ಅಂತಾರೆ . ಆರೋಗ್ಯ ಸಚಿವರು ನಾವು ಶಾಲೆ ಶುರು ಮಾಡ್ತೀವಿ ಅಂತಾರೆ. ಇನ್ನೂ ಸಂಪೂರ್ಣ ತೀರ್ಮಾನ ತೆಗೆದುಕೊಳ್ಳದೆ ಗೊಂದಲದಲ್ಲಿದ್ದಾರೆ ಎಂದು ಹೇಳಿದರು.