ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬಿಜೆಪಿಯಲ್ಲಿ ಸಚಿವರು ಮತ್ತು ಶಾಸಕರ ಮಧ್ಯೆ ಶೀತಲ ಸಮರ ಶುರುವಾಗಿದ್ದು, ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮತ್ತು ಅವರ ಪಿಎಗಳು ಫೋನ್ ಸ್ವೀಕರಿಸುತ್ತಿಲ್ಲ. ಅವರೇನು ದೇವಲೋಕದಿಂದ ಇಳಿದು ಬಂದ್ದಾರಾ? ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸುಧಾಕರ್ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಸ್ವಪಕ್ಷದ ಸಚಿವರ ನಡೆಯನ್ನು ಖಂಡಿಸಿದರು.
ನನ್ನ ಕ್ಷೇತ್ರ ಹೊನ್ನಾಳಿಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕೆಲ ಕೆಲಸದ ವಿಚಾರವಾಗಿ ಮನವಿ ಮಾಡಿದ್ದರೂ ಸಚಿವರು ಸ್ಪಂದಿಸುತ್ತಿಲ್ಲ. ನಾನು ಫೋನ್ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಇವರು ತಮ್ಮ ಕ್ಷೇತ್ರ ಮತ್ತು ವಿಧಾನ ಸೌಧಕ್ಕಷ್ಟೇ ಸಚಿವರಾಗಿದ್ದಾರೆ. ಇವರಿಗೆ ಬೇರೆಯವರ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇನ್ನು ಸಚಿವ ಸುಧಾಕರ್ ಸೇರಿ 5-6ಸಚಿವರೂ ಶಾಸಕರ ಕೈಗೆ ಸಿಗುವುದಿಲ್ಲ. ಆದರೆ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಕೆಲವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಏನು ಎಂದು ತೋರಿಸಬೇಕಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.
ಸುಧಾಕರ್‌ಗೆ ಎರಡೆರಡು ಖಾತೆ ಕೇಳುವುದಕ್ಕೆ ಆಗುತ್ತೆ, ನಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಇವರಿಗೆ ಆಗಲ್ವಾ, ಸುಧಾಕರ್ ಒಬ್ಬರಿಂದಲೇ ಈ ಸರ್ಕಾರ ಬಂದಿಲ್ಲ. ಇವರಷ್ಟೇ ಅಲ್ಲ 5ರಿಂದ 6 ಸಚಿವರು ಶಾಸಕರ ಕೈಗೆ ಸಿಗುತ್ತಿಲ್ಲ. ಇವರೇನು ಬಿಟ್ಟಿ ಬಂದಿಲ್ಲ ಎಂದು ಸಚಿವರ ವಿರುದ್ಧ ಕಿಡಿಕಾರಿದರು.
ನಾನು ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಪಕ್ಷ ಸಂಘಟನೆ ಕೆಲಸ ಮಾಡಿ ಮೂರು ಬಾರಿ ಗೆದ್ದಿದ್ದೇನೆ. ಆದರೆ, ಪಕ್ಷಕ್ಕಾಗಿ ಕೆಲವರ ಕೊಡುಗೆ ಏನಿದೆ ಎಂದು ಪ್ರಶ್ನೆ ಮಾಡಿದ್ದು, ನನಗೆ ಅವಮಾನ ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದರು.