ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಮೇಯರ್ ಚುನಾವಣೆಯಲ್ಲಿ ಮೇಯರ್ ಆಗಿ ಆಯ್ಕೆಯಾದ ಜೆಡಿಎಸ್ ಪಕ್ಷದ ರುಕ್ಮಿಣಿ ಮಾದೇಗೌಡ ಅವರನ್ನು ಶಾಸಕ ಅಶ್ವಿನ್ ಕುಮಾರ್ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಶಾಸಕ ಅಶ್ವಿನ್ ಕುಮಾರ್ ಮೈಸೂರು ನಗರ ಪಾರಂಪರಿಕವಾದ ಹಿನ್ನೆಲೆ ಹೊಂದಿದೆ. ಇದಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆ ಆಗದಂತೆ ಅಭಿವೃದ್ಧಿಯ ಕೆಲಸಗಳನ್ನು ಕೈಗೊಳ್ಳುವ ಮೂಲಕ ಪಕ್ಷವನ್ನು ಸಂಘಟಿಸುವತ್ತವೂ ಶ್ರಮಿಸಬೇಕು. ನಾವು ಸದಾ ಪಕ್ಷದ ಏಳಿಗೆಗಾಗಿ ದುಡಿಯೋಣ ಎಂದು ಕಿವಿ ಮಾತು ಹೇಳಿದರು.
ಪಾಲಿಕೆಯ ಕೌನ್ಸಿಲ್ ಹಾಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಅವರ ಪರವಾಗಿ ಕಾಂಗ್ರೆಸ್ ಸದಸ್ಯರು ಕೈ ಎತ್ತಿದ್ದರಿಂದ ರುಕ್ಮಿಣಿ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಅಧಿಕೃತ ಘೋಷಣೆ ಮಾಡಿದರು.
ಇನ್ನು ಉಪ ಮೇಯರ್ ಆಗಿ ಕಾಂಗ್ರೆಸ್‌ನ ಅನ್ವರ್ ಬೇಗ್ ಆಯ್ಕೆಯಾಗಿದ್ದಾರೆ. ಈ ಮೂರೂ ಪಕ್ಷಗಳು ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿದಿದ್ದವು. ಹೀಗಾಗಿ ಈ ಚುನಾವಣೆ ಮೂರು ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಆದರೆ ಅಂತಿಮವಾಗಿ ಬಿಜೆಪಿಯನ್ನು ಬಗ್ಗು ಬಡಿಯುವ ಉದ್ದೇಶದಿಂದ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಮೇಯರ್ ಅಭ್ಯರ್ಥಿ ಪರ ಕೈ ಎತ್ತುವ ಮೂಲಕ ತಮ್ಮ ಓಟು ಹಾಕಿದರು. ಹೀಗಾಗಿ ಕೊನೆ ಕ್ಷಣದಲ್ಲಿ ಜೆಡಿಎಸ್ ಮೇಯರ್ ಪಟ್ಟ ಅಲಂಕರಿಸುವ ಮೂಲಕ ವಿಜಯದ ನಗೆ ಬೀರಿತ್ತು.
ಜೆಡಿಎಸ್ ಮೇಯರ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ಅವರನ್ನು ಕಾಂಗ್ರೆಸ್ ಸದಸ್ಯರು ಅಂತಿಮಾವಾಗಿ ಬೆಂಬಲಿಸಿದ್ದರಿಂದ ಮೇಯರ್ ಪಟ್ಟ ಜೆಡಿಎಸ್ ಪಾಲಾಯಿತು. ಈ ಮೂಲಕ ಕೊನೆಯ ಕ್ಷಣದಲ್ಲಿ ಕೈ ಸದಸ್ಯರು ಮೇಯರ್ ಚುನಾವಣೆಗೆ ಒಂದು ತಿರುವು ನೀಡಿದರು. ಹೀಗಾಗಿ ಬಿಜೆಪಿಯ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು. ಬಿಜೆಪಿ ಇದೇ ಮೊದಲ ಬಾರಿಗೆ ಮೈಸೂರು ಮೇಯರ್ ಪಕ್ಷ ಅಲಂಕರಿಸಲು ತುದಿಗಾಲಿನಲ್ಲಿ ನಿಂತು ಕನಸು ಕಂಡಿದ್ದು ನುಚ್ಚು ನೂರಾಯಿತು.