ಮೈಸೂರು: ಪೊಲೀಸರಿಗೆ ಗೊತ್ತಿಲ್ಲದೆ ಯಾವುದೇ ಡ್ರಗ್ಸ್ ಹಾಗೂ ಕಳ್ಳತನ ದಂಧೆಗಳು ನಡೆಯುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಡುಗೂರು ಎಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಬಳಕೆಯಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ಇದು ನಿನ್ನೆ ಮೊನ್ನೆ ಪ್ರಕರಣ ಅಲ್ಲ. ನಮಗೆ ಅರಿವು ಇಲ್ಲದೆ ಡ್ರಗ್ಸನ್ನು ನಾವೇ ಬೆಳೆಸಿಕೊಂಡು ಬಂದಿದ್ದೇವೆ. ಹಲವು ಹಂತದಲ್ಲಿ ಬೆಳೆದು ಈಗ ಸೆಲೆಬ್ರಿಟಿಗಳ ಬಳಿ ಬಂದು ನಿಂತಿದೆ. ನಟನಟಿಯರವರೆಗೆ ಬಂದಿರುವುದನ್ನು ಮತ್ತೊಮ್ಮೆ ನಟ, ನಿರ್ದೇಶಕ ಇನ್ನಷ್ಟು ಪ್ರಚಾರ ಮಾಡಿದ್ದು ವಿಶೇಷ ಹಾಗೂ ಸೊಜಿಗ. ಪೊಲೀಸ್ ಇಲಾಖೆ ಮಾಡಬೇಕಿದ್ದ ಕೆಲಸವನ್ನು ನಿರ್ದೇಶಕ ಮಾಡಿದ್ದಾನೆ ಎಂದರು.
ಪೊಲೀಸರಿಗೆ ಎಲ್ಲವು ಗೊತ್ತಿದೆ. ಎಲ್ಲಿ ಕಳ್ಳತನ ಆಗುತ್ತೆ ಎಲ್ಲಿ ಕಳ್ಳರಿದ್ದಾರೆ. ದಂಡುಪಾಳ್ಯದವರು ಏನ್ ಮಾಡುತ್ತಿದ್ದಾರೆ ಎನ್ನುವುದು ಸಹ ಅವರಿಗೆ ಗೊತ್ತಿದೆ. ಪೊಲೀಸರಿಗೆ ಗೊತ್ತಿಲ್ಲದೆ ಏನೂ ನಡೆಯುವುದಿಲ್ಲ.ಆದರೂ ಅವರು ಗೊತ್ತಿಲ್ಲದವರ ರೀತಿ ಇದ್ದಾರೆ. ಪಂಜಾಬ್ ರಾಜ್ಯ ಡ್ರಗ್ಸ್ ದಂಧೆಯಿಂದ ಹಾಳಾಗಿ ಹೋಗಿದೆ. ಅಲ್ಲಿನ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರ ನಲುಗಿ ಹೋಗಿದೆ. ಇದೀಗ ನಮ್ಮ ರಾಜ್ಯದಲ್ಲೂ ಅದೆ ರೀತಿ ವಾತಾವರಣ ನಿರ್ಮಾಣ ಆಗಿದೆ. ಡ್ರಗ್ಸ್ ಬಗ್ಗೆ ಮಾತನಾಡಲು ಮಡಿವಂತಿಕೆ ಬೇಡ ಎಂದರು.
ಈ ಜಾಲ ವ್ಯವಸ್ಥಿತವಾಗಿ ಬಹಳ ವರ್ಷದಿಂದ ನಡೆದು ಬರ್ತಿದೆ. ಹೀಗಾಗಿ ಯಾವುದೇ ಸರ್ಕಾರವನ್ನೂ ಬೊಟ್ಟು ಮಾಡಬಾರದು. ಕೋವಿಡ್ ಹೇಗೆ ಜಗತ್ತಿಗೆ ಆವರಿಸಿದೆ ಅದೆ ರೀತಿ ಡ್ರಗ್ಸ್ ಕೂಡ ಗೊತ್ತಿಲ್ಲದಂತೆ ರಾಜ್ಯವನ್ನು ಆವರಿಸಿದೆ. ಯುವಕ, ಯುವತಿಯರು ತಮಗೆ ಅರಿವಿಲ್ಲದೆ ಈ ಕೂಪಕ್ಕೆ ಬಿದ್ದು ಬಲಿಯಾಗುತ್ತಿದ್ದಾರೆ. ಇದರಿಂದ ಪೊಲೀಸರು ಈಗ ತಲೆಬಾಗಿ ಸಮಾಜದ ಮುಂದೆ ನಿಲ್ಲುವ ಪರಿಸ್ಥಿತಿಗೆ ಬಂದಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ನಾವು ಖುಷಿ ಪಡುತ್ತಿದ್ದೇವೆ. ಅದನ್ನು ಬಿಟ್ಟು ನಾವೆಲ್ಲ ಈ ಬಗ್ಗೆ ಧ್ವನಿ ಎತ್ತಬೇಕು ಎನ್ನುವ ಮೂಲಕ ಡ್ರಗ್ಸ್ ದಂಧೆ ಅವ್ಯಾಹತವಾಗಿ ನಡೆದುಕೊಂಡು ಬಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಮಾಫಿಯಾ ಮಟ್ಟಹಾಕಲು ಸಮಯ ಬಂದಿದೆ
ಕೋವಿಡ್ ಹೇಗೆ ಜಗತ್ತನ್ನು ಆವರಿಸಿದೆಯೋ, ಅದೇ ರೀತಿ ಡ್ರಗ್ಸ್ ದಂಧೆ ಕೂಡ ಗೊತ್ತಿಲ್ಲದೆ ಆವರಿಸಿದೆ. ಈ ದಂಧೆಯನ್ನು ಹತ್ತಿಕ್ಕಲೇಬೇಕು, ಯಾರ್ಯಾರು ಇದ್ದಾರೆ ಅನ್ನೋದು ಬಹಿರಂಗವಾಗಬೇಕು. ಕೆಲ ರಾಜಕಾರಣಿಗಳ, ಚಿತ್ರರಂಗದವರ, ಉದ್ಯಮಿಗಳ ಮಕ್ಕಳ ದೌವಲತ್ತು ಎಲ್ಲರಿಗೂ ತಿಳಿಯಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.