ಮೈಸೂರು: ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊರಗೆ ಬಿಡುತ್ತಿರುವುದರಿಂದ ಕಬಿನಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಪ್ರಮುಖವಾಗಿ ಮೈಸೂರು-ನಂಜನಗೂಡು ಹೆದ್ದಾರಿ ಮುಳುಗಡೆಯಾಗಿದೆ.
ಕಬಿನಿಯಿಂದ 78,000 ಹಾಗೂ ನುಗು ಜಲಾಶಯದಿಂದ 10,206 ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದ್ದು, ಪರಿಣಾಮ ನಂಜನಗೂಡಿನ ಸುತ್ತಮುತ್ತಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ನಂಜನಗೂಡಿನಲ್ಲಿ ಪ್ರವಾಹದಿಂದಾಗಿ 48 ಮನೆಗಳು ಜಲಾವೃತವಾಗಿದ್ದು, 130 ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 61 ಎಕರೆಯಷ್ಟು ಪ್ರದೇಶದಲ್ಲಿ ಬೆಳೆ ನಾಶವಾಗಿದೆ.
ಕಪಿಲಾ ನದಿಯ ಅಬ್ಬರ ಭಾನುವಾರ ಮತ್ತಷ್ಟು ಹೆಚ್ಚಾಗಿದ್ದು, ಮೈಸೂರು–ನಂಜನಗೂಡು ರಾಷ್ಟ್ರೀಯ ಹೆದ್ದಾರಿಗೆ ಮಲ್ಲನಮೂಲೆ ಬಳಿ ನೀರು ನುಗ್ಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಹದಿಂದಾಗಿ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೂ ಪ್ರವಾಹ ಭೀತಿ ಆವರಿಸಿದೆ.
ಇನ್ನು ಹೆದ್ದಾರಿ ಬಂದ್ ಆಗಿರುವುದರಿಂದ ಮೈಸೂರು ಮಾರುಕಟ್ಟೆಗೆ ಕೇರಳ-ತಮಿಳುನಾಡು ರಾಜ್ಯಗಳಿಂದ ಬರಬೇಕಿದ್ದ ಹತ್ತಾರು ಹಣ್ಣು-ತರಕಾರಿ ತುಂಬಿದ ಟ್ರಕ್ ಗಳ ಸಂಚಾರಕ್ಕೆ ತೊಂದರೆಯಾಗಿದೆ. ಇದರಿಂದ ನಷ್ಟ ಅನುಭವಿಸುವ ಭೀತಿಯಲ್ಲಿ ರೈತರಿದ್ದಾರೆ.
ಮಲ್ಲನಮೂಲೆ ಮಠ ಜಲಾವೃತಗೊಂಡಿದ್ದರೆ, ಸುತ್ತೂರಿನಲ್ಲಿ ಶ್ರೀಮಠದವರೆಗೂ ನೀರು ಬಂದಿದೆ. ಸರಗೂರು ತಾಲೂಕಿನ ಹುಣಸಹಳ್ಳಿ ಗ್ರಾಮದ ಭಾಗ್ಯಮ್ಮ ಎಂಬುವವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಕಂಬ ಬಿದ್ದು ಗಾಯಗೊಂಡಿದ್ದಾರೆ.
110 ಮನೆಗಳಿಗೆ ಹಾನಿಯಾಗಿದೆ. ಹೀಗಾಗಿ ಅಧಿಕಾರಿಗಳು ಹೆದ್ದಾರಿ ಬಂದ್ ಮಾಡಿ ವಾಹನಗಳ ಮಾರ್ಗ ಬದಲಿಸಿದ್ದಾರೆ. ಮೈಸೂರಿನಿಂದ ನಂಜನಗೂಡಿಗೆ ತೆರಳಬೇಕು ಎನ್ನುವವರು ತಾಂಡವಪುರ, ಕೆಂಪೇಸಿದ್ದಯ್ಯನಹುಂಡಿ ಮಾರ್ಗವಾಗಿ ನಂಜನಗೂಡಿಗೆ ತೆರಳಬೇಕಿದೆ.ಕಟ್ಟವಾದಿಪುರದಿಂದ ಮೈಸೂರಿಗೆ ತೆರಳಲು ಅನುವು ಮಾಡಿಕೊಡಲಾಗಿದೆ.
ಇನ್ನು ಗೊಲ್ಲೂರು-ಶ್ರೀಕಂಠೇಶ್ವರ ದೇಗುಲ ಸಂಪರ್ಕಿಸುವ ಚಾಮರಾಜನಗರ ರಸ್ತೆ ಕೂಡ ಪ್ರವಾಹದಿಂದಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಳೆ ಮತ್ತು ಹೆಚ್ಚಿನ ನೀರಿನ ಒಳಹರಿವಿನ ಪರಿಣಾಮ ಕಬಿನಿ ಜಲಾಶಯದ ನೀರಿನ ಮಟ್ಟ 2,277.77ಅಡಿಗಳಿಗೆ ಏರಿಕೆಯಾಗಿದೆ. ಅಂತೆಯೇ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದಿಂದ ಶನಿವಾರ ಮಧ್ಯಾಹ್ನ 77 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
ನಂಜನಗೂಡಿಗೆ ಇದೀಗ ಎನ್ ಡಿಆರ್ ಎಫ್ ಸಿಬ್ಬಂದಿ ಬೋಟ್ ಗಳ ಸಮೇತ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಪರಶುರಾಮ ಮತ್ತು ಆಂಜನೇಯ ದೇಗುಲಗಳ ಸ್ನಾನಘಟ್ಟದಲ್ಲಿ ಬೋಟ್ ಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.