ಮೈಸೂರು: ಮೈಸೂರಿಗೆ ಇಬ್ಬರು ಮಹಾರಾಣಿ ಇದ್ದಾರೆ. ಮೂರನೇ ಮಹಾರಾಣಿಯ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಎಚ್.ಪಿ.ಮಂಜುನಾಥ್ ಹರಿಹಾಯ್ದಿದ್ದಾರೆ.
ಮಂಗಳವಾರ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಹಾರಾಣಿಯಾಗಿ ಮೆರೆಯಬೇಡಿ, ನೀವು ಒಬ್ಬ ಅಧಿಕಾರಿಯಾಗಿದ್ದು ಆ ಸ್ಥಾನಕ್ಕೆ ತಕ್ಕಂತೆ ವರ್ತಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನೀವು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಣಸೂರು ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಗಮನ ಸೆಳೆದರೂ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ. ಇನ್ನು ನಾಡಹಬ್ಬ ದಸರಾ ಗಜಪಯಣಕ್ಕೆ ನನ್ನನ್ನು ಏಕೆ ಆಹ್ವಾನಿಸಲಿಲ್ಲ? ನೀವೇ ಗಂಧದ ಕಡ್ಡಿ ಬೆಳಗಿದಿರಿ, ಆ ಕೆಲಸ ನಾವು ಮಾಡುತ್ತಿರಲಿಲ್ಲವೇ ಎಂದು ಸಿಂಧೂರಿ ಅವರನ್ನು ಪ್ರಶ್ನಿಸಿದರು.
ಅಲ್ಲದೇ ನಿಮಗೆ ಅಷ್ಟೊಂದು ಪ್ರಚಾರದ ಆಸಕ್ತಿ ಇದ್ದರೆ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಂಸದ ಪ್ರತಾಪಸಿಂಹ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಪರವಾಗಿ ನಿಂತರು.