ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಒಪ್ಪಂದ ಆಗಿದೆ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ಒಪ್ಪಂದ ಪ್ರಕಾರ ಕಾಂಗ್ರೆಸ್‌ಗೆ ಎರಡು ವರ್ಷ ಹಾಗೂ ಜೆಡಿಎಸ್‌ಗೆ ಮೂರು ವರ್ಷ ಮೇಯರ್ ಸ್ಥಾನ ಎಂದು ನಿರ್ಧರಿಸಲಾಗಿತ್ತು. ಪ್ರಕಾರ ಜೆಡಿಎಸ್ ನಡೆದುಕೊಳ್ಳಲಿದೆ ಎಂದು ನಾವು ಭಾವಿಸಿದ್ದೇವೆ. ನಾವು ನಮ್ಮ ಮಾತಿಗೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಇನ್ನು ಮೈತ್ರಿ ಮುರಿಯುವ ವಿಚಾರವಾಗಿ ಯಾರು ಏನು ಹೇಳಿದ್ದಾರೆ ಏನು ಮಾಡಿದ್ದಾರೆ ಎಂಬುದನ್ನು ನಾನು ಪ್ರತ್ಯಕ್ಷವಾಗಿ ನೋಡಿ ತಿಳಿಯುವವರೆಗೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ನಮ್ಮ ಪಕ್ಷಕ್ಕೆ ಸಹ ಸದಸ್ಯರಾಗಿ ಕೆಲಸ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ರಾಜಕೀಯ ಪಕ್ಷ ಸೇರಲು ಸಾಧ್ಯವಿಲ್ಲ. ಆದರೆ, ಪಕ್ಷೇತರ ಅಭ್ಯರ್ಥಿ ಸಿದ್ಧಾಂತದ ಆಧಾರದ ಮೇಲೆ ಸದಸ್ಯನಾಗಿ ಒಂದು ಪಕ್ಷಕ್ಕೆ ಬೆಂಬಲ ನೀಡಬಹುದು. ಜತೆಗೆ ಅವರ ಕಾರ್ಯಕರ್ತರು ಪಕ್ಷ ಸೇರಬಹುದು ಎಂದು ಶರತ್ ಬಚ್ಚೇಗೌಡ ಅವರು ತಮ್ಮನ್ನು ಭೇಟಿಯಾಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಇನ್ನು ರಾಜ್ಯದಲ್ಲಿ ಪಾದಯಾತ್ರೆ ವಿಚಾರವಾಗಿ ಗುರುವಾರ ಸಭೆ ನಡೆಯಲಿದ್ದು, ನಂತರ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಶಿವಕುಮಾರ್ ಈ ರೀತಿ ಹೇಳಿದರು.