ಮೈಸೂರು: ನೊಂದವರಿಗೆ ಮತ್ತು ಅತ್ಯಾಚಾರಕ್ಕೆ ಒಳಗಾದವರಿಗೆ ನ್ಯಾಯಕೊಡಿಸದಬೇಕಾದ ಪೊಲೀಸ್ ಅಧಿಕಾರಿಗಳೇ ಮೋಸ ಹೋದರೆ ಮತ್ತು ಮೋಸ ಮಾಡಿದರೆ ಸಾಮಾನ್ಯ ಜನರು ಯಾರ ಬಳಿ ನ್ಯಾಯ ಕೊಡಿಸಿ ಎಂದು ಹೋಗಬೇಕು.
ಇದೇನಪ್ಪ ಇದು ಹೀಗೆ ಹೇಳುತ್ತಿದ್ದೀರಲ್ಲ ಯಾರು ಯಾರಿಗೆ ಮೋಸ ಮಾಡಿದರು ಎಂದು ಯೋಚಿಸುತ್ತಿದ್ದೀರ! ಅದುಬಿಡಿ ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ. ಅದೇನೆಂದರೆ ಅರಮನೆಗಳ ನಗರಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಲವ್ ಸೆಕ್ಸ್ ದೋಖಾ ಪ್ರಕರಣ ದಾಖಲಾಗಿದೆ. ವಿಪರ್ಯಾಸವೆಂದರೆ ಮೋಸ ಮಾಡಿದವರು ಮತ್ತು ಮೋಸ ಹೋದವರು ಇಬ್ಬರೂ ಸಹ ಪೊಲೀಸ್ ಸಬ್ ಇನ್ಸ್ ಪೆಕ್ಟರ್‌ಗಳಾಗಿದ್ದಾರೆ.
ಹೌದು! ನಗರದ ನರಸಿಂಹರಾಜ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆನಂದ್ ವಿರುದ್ಧ ವಿವಿ ಪುರಂ ಠಾಣೆಯ ಮಹಿಳಾ ಇನ್ಸ್ ಪೆಕ್ಟರ್ ದೂರು ನೀಡಿದ್ದಾರೆ. ಅದೇನಪ್ಪ ಅಂದರೆ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭವತಿ ಮಾಡಿದ್ದಾನೆ ಈ ಎಸ್ಐ, ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ನ್ಯಾಯಕೊಡಿಸಿ ಎಂದು ಕೇಳಿಕೊಂಡಿದ್ದಾರೆ.
ಮದುವೆಯಾಗುವುದಾಗಿ ನನ್ನ ನಂಬಿಸಿ ಹಲವು ಕಡೆಗಳಲ್ಲಿ ಬಲವಂತದ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಗರ್ಭವತಿಯಾದ ನನ್ನನ್ನು ಗರ್ಭಪಾತಕ್ಕೆ ಒತ್ತಾಯಿಸಿದ್ದ ಒಪ್ಪದಿದ್ದಾಗ ಹಾರ್ಲಿಕ್ಸ್, ಡ್ರೈಫ್ರೂಟ್, ವಿಟಮಿನ್ ಮಾತ್ರೆಗಳು ಎಂದು ಹೇಳಿ ಔಷಧ ಕೊಟ್ಟು ಗರ್ಭಪಾತ ಮಾಡಿಸಿದ್ದಾನೆ. ಗರ್ಭವತಿಯಾದ ನಾನು ಮದುವೆಗೆ ಒತ್ತಾಯಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದೀಗ ಎಸ್ಐ ಆನಂದ್ ಬೇರೆ ಮದುವೆಯಾಗಿರುವ ವಿಚಾರವೂ ಬೆಳಕಿಗೆ ಬಂದಿದೆ. ಈ ಹಿಂದೆ ಬೇರೆ ಹುಡುಗಿಯೊಂದಿಗೆ ಮದುವೆಯಾಗಲು ಯತ್ನಿಸಿದ ಆನಂದನನ್ನು ನಾನು ತಡೆದು ಮೊದಲ ಬಾರಿ ಮದುವೆ ನಿಲ್ಲಿಸಿದೆ. ಆದರೆ, ಎರಡನೇ ಮದುವೆ ಸ್ಥಳಕ್ಕೆ ತೆರಳಿ ಮದುವೆ ನಿಲ್ಲಿಸಲು ಸಾಧ್ಯವಾಗಲಿಲ್ಲ. ಕದ್ದುಮುಚ್ಚಿ ಮದುವೆಯಾಗಿದ್ದಾನೆ ಹೀಗಾಗಿ ಈತನ ವಿರುದ್ಧ ಕ್ರಮ ಜರುಗಿಸಿ ನ್ಯಾಯ ಕೊಡಿಸಿ ಎಂದು ಮಹಿಳೆ ಎಸ್‌ಐ ದೂರಿನಲ್ಲಿ ಮನವಿ ಮಾಡಿದ್ದಾರೆ.