ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ನಗರದಲ್ಲಿ 27 ಲಕ್ಷ ಗಿಡ ನೆಡಲು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದೇವೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಗೌಡ ತಿಳಿಸಿದ್ದಾರೆ.
ಯಾರು ಯಾರು ಗಿಡಗಳನ್ನು ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇದೆ. ಇನ್ನೊಂದು ತಿಂಗಳಲ್ಲಿ ಅವುಗಳ ಲೆಕ್ಕ ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಗಿಡ ನೆಟ್ಟು, ಕೊಟ್ಟು ಕೈ ತೊಳೆದುಕೊಳ್ಳುವ ರಾಜಕಾರಣಿ ನಾನಲ್ಲ ಹಾಗಾಗಿ ಎಲ್ಲಾ ಸಸಿಗಳನ್ನು ನೆಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಕಾರ್ಪೋರೇಶನ್, ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಇಲಾಖೆಗಳಿಂದ ಗಿಡಗಳನ್ನು ಪಡೆಯಲಾಗಿದೆ. ಇನ್ನೊಂದು ತಿಂಗಳು ಬಿಟ್ಟು ಅಧಿಕಾರಿಗಳು ಅದನ್ನು ಎಲ್ಲಿ ನೆಡಲಾಗಿದೆ. ನಿರ್ವಹಣೆ ಜವಾಬ್ದಾರಿಯನ್ನು ಯಾರು ವಹಿಸಲಿದ್ದಾರೆ ಎಂಬ ನಿಟ್ಟಿನಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ ಎಂದರು.
ಈವರೆಗೆ ನಾವು ಗಮನಿಸಿದಂತೆ ವಿಶ್ವ ಪರಿಸರ ದಿನದಂದು ಎಲ್ಲರೂ ಬಂದು ಗಿಡಗಳನ್ನು ಪಡೆಯುವುದು, ನೆಡುವುದನ್ನು ಮಾಡಿ ಹೋಗುತ್ತಾರೆ. ಬಳಿಕ ಅದು ಏನಾಯಿತು ಎಂದು ಚಿಂತಿಸುವುದಿಲ್ಲ. ಈ ಕಾರಣಕ್ಕಾಗಿ ನೆಟ್ಟ ಪ್ರತಿಯೊಂದು ಗಿಡವನ್ನೂ 3 ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿಯನ್ನು ಯಾರು ಹೊತ್ತಿದ್ದಾರೆಂಬುದನ್ನೂ ನಾವು ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ 1 ಲಕ್ಷ ಗಿಡವನ್ನು ನೆಡುವ ಯೋಜನೆ ಇದ್ದು, ಈ ಬಗ್ಗೆ ಚರ್ಚಿಸಲು ಅರಣ್ಯ ಸಚಿವರೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.