ಮೈಸೂರು: ತಾಲೂಕಿನಾದ್ಯಂತ ಪೂರ್ವ ಮುಂಗಾರಿನಲ್ಲಿ ಬಿದ್ದ ಮಳೆಗೆ ರೈತರು ಉದ್ದು, ಹೆಸರು ಹಾಗೂ ಅಲಸಂದೆ ಬೆಳೆಗಳನ್ನು ಬಿತ್ತಿದ್ದು, ಈ ಬೆಳೆಗಳಲ್ಲಿ ಹೆಚ್ಚಾಗಿ ಹಳದಿ ಮಚ್ಚೆರೋಗ (Yellow mosaic virus) ಕಾಣಿಸಿಕೊಂಡಿದ್ದು, ತಾಕುಗಳು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿ ಕಾಳುಗಳ ಉತ್ಪತ್ತಿ ಹಾಗೂ ಗುಣಮಟ್ಟದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ.
ಹೆಸರು ಮತ್ತು ಉದ್ದು ಬೆಳೆಯಲ್ಲಿ ಹಳದಿ ಮಚ್ಚೆರೋಗ: ಈ ಹಸಿರು ಮಿಶ್ರಿತ ಹಳದಿ ರೋಗವು ಮೊದಮೊದಲು ಒಂದು ಅಥವಾ ಎರಡು ಗಿಡಗಳಿಗೆ ಕಾಣಿಸಿಕೊಂಡು ನಂತರ ಬಿಳಿನೊಣಗಳ ಮೂಲಕ ಅತಿ ಹೆಚ್ಚು ವೇಗವಾಗಿ ಪ್ರಸಾರವಾಗುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಅಲಸಂದೆ ಹಳದಿ ರೋಗ: ಈ ರೋಗವು ಅಲಸಂದೆ ತಾಕುಗಳಲ್ಲಿ ಹೆಚ್ಚು ಕಂಡುಬಂದಿದ್ದು ಎಫಿಡ್ ಎಂಬ ಹೇನಿನ ಮೂಲಕ ಹರಡುತ್ತಿದೆ. ವಾತಾವರಣದಲ್ಲಿ ಹೆಚ್ಚು ಉಷ್ಣಾಂಶ ಹಾಗೂ ತೇವಾಂಶಗಳಿದ್ದು, ಈ ಕೀಟವು ತ್ವರಿತಗತಿಯಲ್ಲಿ ಸಂತಾನಾಭಿವೃದ್ಧಿ ಮಾಡಿ ಮರಿ ಹಾಗೂ ರೆಕ್ಕೆಬಂದಂತಹ ಹೇನಿಗಳ ಮೂಲಕ ಹಾರಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ರಸ ಹೀರುವ ಮೂಲಕ ರೋಗವನ್ನು ಪ್ರಸಾರಮಾಡುತ್ತದೆ.
ಉದ್ದು, ಹೆಸರು ಹಾಗೂ ಅಲಸಂದೆ ಬೆಳೆಗಳಿಗೆ ಹಳದಿ ಮಚ್ಚೆರೋಗ ಬಂದಿದ್ದಲ್ಲಿ ರೈತರು ಕೀಟನಾಶಕಗಳಾದ ರೋಗರ್ 1.75 ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು ಅಥವಾ ಇಮಿಡಾಕ್ಲೋಪ್ರಿಡ್ 0.50 ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಸಿಂಪಡಣೆ ಆದ ನಂತರ ರೋಗಗ್ರಸ್ತ ಗದ್ದೆ ಅಥವಾ ಹೊಲಗಳಲ್ಲಿರುವ ಹಳದಿ ಮಿಶ್ರಿತ ಗಿಡಗಳನ್ನು ಕಿತ್ತು ನಾಶಪಡಿಸುವುದು.
ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕೆ.ಪಿ ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail