- ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಸಹಕಾರ ಬ್ಯಾಂಕ್‍ಗಳಿಂದ ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ನಷ್ಟದ ಪ್ರಮಾಣವನ್ನು ತಗ್ಗಿಸಿ ಲಾಭಾಂಶವನ್ನು ಗಳಿಸಬಹುದಾಗಿದೆ ಎಂದು ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಕೆಂಪಯ್ಯನಹುಂಡಿ ಮಹದೇವಣ್ಣ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಏರ್ಪಡಿಸಲಾಗಿದ್ದ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದರು.
ಪಡೆದ ಸಾಲವನ್ನು ಬ್ಯಾಂಕ್‌ಗೆ ಜಮೆ ಮಾಡದೇ ಸುಸ್ತಿದಾರರಾದರೆ ಬ್ಯಾಂಕ್ ನಷ್ಟ ಅನುಭವಿಸ ಬೇಕಾಗುತ್ತದೆ. ಇದರಿಂದಾಗಿ ಮುಂದೆ ಸದಸ್ಯರಿಗೆ ಹೆಚ್ಚಿನ ಪ್ರಮಾಣದ ಸಾಲ ನೀಡಲು ಬ್ಯಾಂಕ್ ಶಕ್ತವಾಗಿರುವುದಿಲ್ಲ. ಹೀಗಾಗಿ ಬ್ಯಾಂಕ್ 2019-20 ನೇ ಸಾಲಿನಲ್ಲಿ 1 ಕೋಟಿ 61 ಲಕ್ಷಗಳ ನಿವ್ವಳ ನಷ್ಟ ಅನುಭವಿಸಿದೆ ಎಂದರು.
ಇನ್ನು ಸದಸ್ಯರಿಗೆ ನೀಡಬೇಕಾದ ಸಾಲ ಸೌಲಭ್ಯ ಸಕಾಲಕ್ಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಆದರೆ 2020-21 ನೇ ಸಾಲಿನಲ್ಲಿ ಬ್ಯಾಂಕ್ ಮತ್ತೆ ನಷ್ಟ ಅನುಭವಿಸುವುದನ್ನು ತಡೆಯಲು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಸಾಲ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ಸಂಘದ ಸದಸ್ಯತ್ವ ಪಡೆಯಲು ಈ ಹಿಂದೆ 500 ರೂ. ನಿಗದಿ ಪಡಿಸಲಾಗಿತ್ತಾದರೂ ಈಗ ಸರ್ಕಾರದ ಆದೇಶದನ್ವಯ 1 ಸಾವಿರ ರೂ.ಗಳಿಗೆ ನಿಗದಿ ಪಡಿಸಲಾಗಿದ್ದು ಸದಸ್ಯರು ಆಡಳಿತ ಮಂಡಳಿಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಕೊರೊನಾ ಸಂಕಷ್ಟದ ನಡುವೆಯೂ ಖುದ್ದಾಗಿ ಪ್ರತಿ ಹಳ್ಳಿ ಪ್ರತಿಮನೆಗೆ ತೆರಳಿ ಸಾಲ ವಸೂಲಿ ಮಾಡಲಾಗಿದೆ. ಇದರಿಂದಾಗಿ 4.60 ಕೋಟಿ ರೂ.ಗಳ ವಸೂಲಾತಿ ಮಾಡಲಾಗಿದ್ದು ಸಂಘದ ಪ್ರತಿ ಯೊಬ್ಬ
ಸದಸ್ಯರಿಗೂ ಹಂತ ಹಂತವಾಗಿ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗುವುದೆಂದು ಭರವಸೆ ನೀಡಿದರು.
ಸಂಘದ ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಪ್ರಭಾರ ವ್ಯವಸ್ಥಾಪಕಿ ಡಿ.ನಾಗವೇಣಿ ಬ್ಯಾಂಕ್ ಈಗ 88.85 ಲಕ್ಷ ಷೇರು ಬಂಡವಾಳ ಹೊಂದಿದ್ದು,ವಿವಿಧ ಯೋಜನೆಗಳಲ್ಲಿ 586.61 ಲಕ್ಷ ರೂ.ಗಳ ಹೊರ ಬಾಕಿ ಇದೆ. ಸದರಿ ಸಾಲಿನಲ್ಲಿ 60.63 ಲಕ್ಷ ರೂ.ಗಳ ಸಾಲ ಮಂಜೂರಾಗಿದ್ದರೂ ಸಹ ಕೋವಿಡ್ ಕಾರಣದಿಂದ 10.20 ಲಕ್ಷ ರೂ. ಸಾಲ ವಿತರಣೆ ಮಾಡಿ ಉಳಿಕೆ ಹಣ 50.43 ಲಕ್ಷ ರೂ.ಗಳನ್ನು ನಂತರದ ದಿನಗಳಲ್ಲಿ ವಿತರಣೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಈ ವೇಳೆ ಕೆಲ ಸದಸ್ಯರು ಸಭೆಯ ನೋಟಿಸ್ ತಲುಪಿಲ್ಲದ ಬಗ್ಗೆ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದರು. ಖಾಸಗಿ ಹಣ ಕಾಸು ಸಂಸ್ಥೆಗಳು ಕೋಟ್ಯಂತರ ರೂ. ಲಾಭಾಂಶ ಗಳಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಆದರೆ ಸರ್ಕಾರದ ಅನುದಾನ ಪಡೆದಿರುವ ಪಿಎಲ್ ಡಿ ಬ್ಯಾಂಕ್ ಆರ್ಥಿಕ ನಷ್ಟ ಅನುಭವಿಸಲು ಕಾರಣವೇನು ಎಂದು ಕೆಲ ಸದಸ್ಯರು ಪ್ರಶ್ನಿಸಿದರು.
ಬ್ಯಾಂಕ್‌ನ ಉಪಾಧ್ಯಕ್ಷ ಬಿ.ಎಂ.ಲಿಂಗರಾಜು, ಮಾಜಿ ಅಧ್ಯಕ್ಷರಾದ ವಜ್ರೇಗೌಡ, ಎಂ.ಎಸ್.ಶಿವ ಮೂರ್ತಿ, ನಿರ್ದೇಶಕರಾದ ಗಂಗಮ್ಮ, ಎಂ.ಮಲ್ಲಿ ಕಾರ್ಜುನ ಸ್ವಾಮಿ, ವಿರೂಪಾಕ್ಷ, ಸುಂದರ, ಎಂ.ನಾಗರತ್ನ, ಬಿ.ಸಿ.ಪಾರ್ಥಸಾರಥಿ, ಟಿ.ಎಸ್. ಸಿದ್ದರಾಜು, ಎಸ್.ಲಿಂಗಪ್ಪಾಜಿ, ಎನ್.ಎಂ.ಮಹದೇವಸ್ವಾಮಿ, ಸಿಬ್ಬಂದಿ ವರ್ಗದ ಎನ್.ಮಹೇಶ್,ರಫಿಯಾ ಕೌಸರ್, ಬಿ.ಶಂಕರ್ ಇದ್ದರು.