ನ್ಯೂಡೆಲ್ಲಿ: ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಟ್ಟಿದೆ.
ಮಾರಕ ಕೊರೊನಾ ವೈರಸ್ ಮಾ.13ರಂದು ಭಾರತ ಪ್ರವೇಶ ಮಾಡುತ್ತಿದ್ದಂತೆಯೇ ಮಾಸ್ಕ್ ಗಳು, ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಹೇರಿತ್ತು. ಇದೀಗ ಈ ಪಟ್ಟಿಯಿಂದ ಇವುಗಳನ್ನು ಕೈ ಬಿಟ್ಟಿದ್ದು, ದೇಶದಲ್ಲಿ ಪ್ರಸ್ತುತ ಎನ್ 95 ಮಾಸ್ಕ್ ಮತ್ತು ಸ್ಯಾನಿಟೈಸರ್ ಸಾಕಷ್ಟು ದಾಸ್ತಾನಿದ್ದು, ಇದೇ ಕಾರಣಕ್ಕೆ ಅಗತ್ಯ ವಸ್ತುಗಳ ಪಟ್ಟಿಯಿಂದ ಕೈ ಬಿಟ್ಟಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಕೊರೊನಾ ವೈರಸ್ ದೇಶಕ್ಕೆ ಪ್ರವೇಶ ಮಾಡಿದ್ದ ಸಂದರ್ಭದಲ್ಲಿ ಮಾರ್ಚ್ 13ರಂದು ಅಗತ್ಯ ಸರಕುಗಳ ಕಾಯ್ದೆ, 1955ರ ಅಡಿಯಲ್ಲಿ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಅಗತ್ಯ ವಸ್ತುಗಳು ಎಂದು ಘೋಷಣೆ ಮಾಡಲಾಗಿತ್ತು. ಅಂತೆಯೇ 100 ದಿನಗಳ ಕಾಲ ಅವುಗಳ ರಫ್ತು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲಾಗಿತ್ತು.
ಇದೀಗ ಪರಿಸ್ಥಿತಿ ಬದಲಾಗಿದ್ದು, ಇವುಗಳ ದಾಸ್ತಾನು ಸಾಕಷ್ಟಿದೆ. ಜತೆಗೆ ಸ್ಯಾನಿಟೈಸರ್ ಗಳ ಉತ್ಪಾದನೆಯಾಗುತ್ತಿದೆ. ಹೀಗಾಗಿ ದೇಶದಲ್ಲಿ ಮಾಸ್ಕ್ ಗಳು, ಹ್ಯಾಂಡ್ ಸ್ಯಾನಿಟೈಸರ್ ಕೊರತೆ ಉಂಟಾಗದು. ಇದೇ ಕಾರಣಕ್ಕೆ ಅಗತ್ಯ ವಸ್ತುಗಳ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಹೇಳಿದರು.
ಜೂನ್ 30ಕ್ಕೆ 100 ದಿನಗಳು ಪೂರ್ಣಗೊಂಡಿದ್ದು, ಇದೀಗ ಕೇಂದ್ರಸರ್ಕಾರ ಮತ್ತು ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿಯೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಲ್ಲದೆ ಎಲ್ಲ ರಾಜ್ಯಗಳ ಜತೆ ಚರ್ಚೆ ನಡೆಸಿದ್ದೇವೆ. ಎಲ್ಲ ರಾಜ್ಯಗಳಲ್ಲೂ ಮಾಸ್ಕ್ ಗಳು ಮತ್ತು ಸ್ಯಾನಿಟೈಸರ್ ಗಳ ಸಾಕಷ್ಟು ದಾಸ್ತಾನಿದೆ ಎಂಬುದುನ್ನು ಖಚಿತ ಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.