ನ್ಯೂಡೆಲ್ಲಿ: ಕೋವಿಡ್ ನಿಂದಾಗಿ ದೇಶದ ಆರ್ಥಿಕತೆಗೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಇನ್ನು ಒಂದು ವರ್ಷದ ವರೆಗೆ ಯಾವುದೇ ಹೊಸ ಯೋಜನೆ ಘೋಷಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಜನರು ಸಂಕಷ್ಟದಲ್ಲಿರುವುದನ್ನು ಅರಿತು ಈಗಾಗಲೇ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಲಾಗಿದೆ. ಈ ಪ್ಯಾಕೇಜ್ ಸಮರ್ಪಕ ಬಳಗೆಯಾವುವವರೆಗೆ ಮತ್ತೆ ಯಾವುದೇ ಹೊಸ ಯೋಜನೆ ಜಾರಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಘೋಷಿಸಿರುವ ಯೋಜನೆ ಮತ್ತು ಇತ್ತೀಚೆಗೆ ಪ್ರಕಟಿಸಲಾದ ಆತ್ಮನಿರ್ಭರ್ ಪ್ಯಾಕೇಜ್‌ಗಳಿಗೆ ಮಾತ್ರ ಸಾರ್ವಜನಿಕರ ಹಣ ಬಳಕೆಯಾಗಲಿದೆ ಎಂದು ಹೇಳಿದ್ದಾರೆ.
ಬಜೆಟ್ ಯೋಜನೆಗಳು, ಹಣಕಾಸು ಸ್ಥಾಯೀ ಸಮಿತಿಯ ಅನುಮೋದನೆ ಪಡೆದಿರುವ ಯೋಜನೆಗಳನ್ನು 2021ರ ಮಾ. 31ರವರೆಗೆ ಅಮಾನತಿನಲ್ಲಿಡಲಾಗುವುದು. ಹೊಸ ಯೋಜನೆಗಳ ಪ್ರಸ್ತಾವನೆ ಕಳುಹಿಸದಿರುವಂತೆಯೂ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ವಿತ್ತ ಸಚಿವಾಯಲ ತಿಳಿಸಿದೆ.
ಆರ್ಥಿಕ ಕುಸಿತ ಕಾರಣ
ಭಾರತದ ಒಟ್ಟಾರೆ ದೇಶೀಯ ಉತ್ಪನ್ನ (ಜಿಡಿಪಿ) ಕಳೆದ 11 ವರ್ಷಗಳಲ್ಲಿಯೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಮೂಡೀಸ್ ಇನ್ವೆಸ್ಟರ್ ಕಂಪೆನಿಯೂ ಭಾರತಕ್ಕೆ ಇದ್ದ ಕ್ರೆಡಿಟ್ ರೇಟಿಂಗ್ ಅನ್ನು ಕೆಳಕ್ಕೆ ಇಳಿಸಿರುವುದು ಹೂಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಸರ್ಕಾರ ಹೊಸ ಯೋಜನೆಗಳನ್ನು ಪ್ರಕಟಿಸದಿರಲು ನಿರ್ಧರಿಸಿದೆ.
ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (ಸಿಜಿಎ) ಅಂಕಿಅಂಶ ಪ್ರಕಾರ, 2020ರ ಏಪ್ರಿಲ್‌ನಲ್ಲಿ ದೇಶದ ಆದಾಯ 27,548 ಕೋಟಿ ರೂ. ಇದು ಭಾರತದ ಬಜೆಟ್‌ನ ಶೇ. 1.2ರಷ್ಟು ಮೊತ್ತ. ಕಳೆದ ವರ್ಷ ಇದೇ ತಿಂಗಳಲ್ಲಿ ಭಾರತದ ಆದಾಯ 3.07 ಲಕ್ಷ ಕೋಟಿ ರೂ. ಆಗಿತ್ತು! ಅದು ಭಾರತದ ಆ ವರ್ಷದ ಬಜೆಟ್‌ನ ಶೇ.10ರಷ್ಟು ಮೊತ್ತಕ್ಕೆ ಸಮವಾಗಿತ್ತು.