ನ್ಯೂಡೆಲ್ಲಿ: ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಎಲ್ಲಾ ಸಹಕಾರಿ ಬ್ಯಾಂಕ್‌ಗಳನ್ನು ರಿಸರ್ವ್ ಬ್ಯಾಂಕ್ ಅಡಿಯಲ್ಲಿ ತರಲು ಇಂದು ನಡೆದ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆ ಸುಗ್ರಿವಾಜ್ಞೆ ಹೊರಡಿಸಲು ಒಪ್ಪಿಗೆ ನೀಡಿದೆ.
ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿರುವ ಗ್ರಾಹಕರ ಹಿತ ಕಾಯಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೂ ಮುನ್ನ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ – 2020 ವರ್ಷದ ಬಜೆಟ್ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಮುಂದಾಗಿತ್ತು. ಆದರೆ ಕೊರೊನಾದಿಂದಾಗಿ ಅಧಿವೇಶನವನ್ನು ಮುಂದೂಡಿದ್ದರಿಂದ ಮಸೂದೆ ಪಾಸ್ ಆಗಿರಲಿಲ್ಲ. ಹೀಗಾಗಿ ಸುಗ್ರಿವಾಜ್ಞೆ ಹೊರಡಿಸಲು ಒಪ್ಪಿಗೆ ನೀಡಿದೆ ಎಂದು ಸರ್ಕಾರ ತಿಳಿಸಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಕಾಶ್ ಜಾವಡೇಕರ್ ಈ ಸಂಬಂಧ ವಿಡಿಯೋ ಕನ್ಫರೆನ್ಸ್ ಮೂಲಕ ಮಾಧ್ಯಮಗಳ ಜತೆ ಮಾತನಾಡಿ, ಇನ್ನು ಮುಂದೆ 1,482 ನಗರ ಸಹಕಾರ ಬ್ಯಾಂಕ್‌ಗಳು ಮತ್ತು 58 ರಾಜ್ಯ ಸಹಕಾರಿ ಬ್ಯಾಂಕ್‌ಗಳು ಆರ್‌ಬಿಐ ನಿಗಾದಲ್ಲಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಕಳೆದ ವರ್ಷ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ಗಳಲ್ಲಿ ನಡೆದ ಅವ್ಯವಹಾರ ಬೆಳಕಿಗೆ ಬಂದ ನಂತರ ಗ್ರಾಹಕರ ಹಿತವನ್ನು ಸರ್ಕಾರ ಕಾಪಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಈ ವರ್ಷದ ಬಜೆಟ್‌ನಲ್ಲಿ ಹಣಕಾಸು ಸಚಿವೆ ಆರ್‌ಬಿಐ ಅಡಿಯಲ್ಲಿ ಸಹಕಾರಿ ಬ್ಯಾಂಕ್‌ಗಳು ತರಲಾಗುವುದು ಎಂದು ತಿಳಿಸಿದ್ದರು. ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ರಾಷ್ಟ್ರಪತಿಗಳು ಸುಗ್ರೀವಾಜ್ಞೆಗೆ ಸಹಿ ಹಾಕಿದ ದಿನದಿಂದ ಇದು ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ವಿವರಿಸಿದರು.