ನ್ಯೂಡೆಲ್ಲಿ: ದೇಶದ 80 ಕೋಟಿ ಜನರಿಗೆ ನವೆಂಬರ್ ವರೆಗೆ ಉಚಿತವಾಗಿ 5ಕೆ.ಜಿ. ಅಕ್ಕಿ ಅಥವಾ 5 ಕೆ.ಜಿ.ಗೋಧಿ ಮತ್ತು ಕುಟುಂಬಕ್ಕೆ 1ಕೆ.ಜಿ. ಬೇಳೆಯನ್ನು ಉಚಿತವಾಗಿ ಕೊಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಕೊರೊನಾ ವಿಶ್ವಮಾರಿಯಿಂದ ಕೆಲಸವಿಲ್ಲದೆ ಮನೆಯಲ್ಲಿ ಇರುವ ಬಡವರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಮಂಗಳವಾರ ಮಧ್ಯಾಹ್ನ ದೇಶವನ್ನುದ್ದೇಶಿಸಿ 6ನೇ ಬಾರಿಗೆ ಮಾತನಾಡಲು ಆಯೋಜಿಸಿದ್ದ ಭಾಷಣದಲ್ಲಿ ತಿಳಿಸಿದರು.
ಕುಟುಂಬದ ಪ್ರತಿ ಸದಸ್ಯನಿಗೆ 5ಕೆಜಿ ಅಕ್ಕಿ, ಅಥವಾ ಗೋಧಿ ಕೊಡಲಾಗುವುದು ಇದಕ್ಕಾಗಿ ಸುಮಾರು 90 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಿದರು.
ಸೂಕ್ತ ಸಮಯದಲ್ಲಿ ಲಾಕ್‌ಡೌನ್ ಮಾಡಿದ ಹಿನ್ನೆಲೆಯಲ್ಲಿ ಜೀವ ಉಳಿದಿದೆ. ಇಂದು ಕಂಟೈನ್ ಮೆಂಟ್ ಜೋನ್‌ಗಳ ಮೇಲೆ ತೀವ್ರ ನಿಗಾವಹಿಸುವ ಅವಶ್ಯವಿದ್ದು, ಜನರು ಕೊರೊನಾ ನಿಯಮಗಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆ ಜಾರಿ ಮಾಡಿದೆ. ಇದರಿಂದ ಬಡವರಿಗೆ ಅನುಕೂಲ ವಾಗಲಿದೆ. ಈ ಉದ್ದೇಶದಿಂದಲೇ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಬಡವರ ಕೈಗೆ ಕೆಲಸಕೊಡಲು ಶ್ರಮಿಸಲಾಗುವುದು ಎಂದು ಹೇಳಿದರು.
ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆ ಈಗಾಗಲೇ ಕೆಲ ರಾಜ್ಯಗಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ, ಇನ್ನು ಉಳಿದ ರಾಜ್ಯಗಳಲ್ಲೂ ಶೀಘ್ರದಲ್ಲೇ ಜಾರಿ ಮಾಡಲಾಗುವುದು. ಇದರಿಂದ ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗುವ ಬಡವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.