ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ತಾಲೂಕಿನ ಕಲ್ಕೆರೆ ಮತ್ತು ದೊಡ್ಡ ಬ್ಯಾಲಾಳು ಗ್ರಾಮದ ಅದಾನಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಗುರುವಾರ ಬೆಳಗ್ಗೆ 7 ಗಂಟೆಯಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಭಯಭೀತರಾಗಿದ್ದರು.
ಚಿರತೆ ಇರುವ ಬಗ್ಗೆ ಸೋಲಾರ್ ಘಟಕದ ಸುರಕ್ಷತಾ ಅಧಿಕಾರಿ ಬಿ.ಸಿ.ತಮ್ಮಣ್ಣೇಗೌಡ ಎಂಬುವವರು ಕೂಡಲೇ ಪಿರಿಯಾಪಟ್ಟಣ ತಾಲೂಕು ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಒಳಗೆ ನುಗ್ಗಿ ಗಾಬರಿಗೊಂಡ ಚಿರತೆ ಸೋಲಾರ್ ಘಟಕದ ಸುತ್ತಲೂ ಹಾಕಿರುವ ತಂತಿ ಹಾಗೂ ಮುಳ್ಳಿನ ಬೇಲಿಯನ್ನು ಹಾರಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ನಂತರ ಸೋಲಾರ್ ಘಟಕದ ಮುಖ್ಯ ದ್ವಾರದ ವಾಹನ ನಿಲುಗಡೆ ಶೆಡ್ ನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಇದ್ದು, ನಂತರ ಗೇಟ್ ಮೂಲಕ ಪಕ್ಕದಲ್ಲೇ ಇರುವ ಸಾಮಾಜಿಕ ಅರಣ್ಯ ಪ್ರದೇಶದತ್ತ ಹೊರಟಿತು.
ಚಿರತೆ ಹೋದ ನಂತರ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಸಿಬ್ಬಂದಿಗೆ ಧೈರ್ಯ ತುಂಬಿದರು.