ನ್ಯೂಡೆಲ್ಲಿ: ದೇಶದ ಪ್ರವಾಹಪೀಡಿತ 6 ರಾಜ್ಯಗಳ ಮುಖ್ಯ ಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.
ದೇಶದ ಹಲವು ರಾಜ್ಯಗಳಲ್ಲಿ ಮಳೆಯಿಂದ ಉಂಟಾಗಿರುವ ಪ್ರವಾಹ ಸ್ಥಿತಿ ಮತ್ತು ಹಾನಿಯ ಬಗ್ಗೆ ಮೋದಿ ಸೋಮವಾರ ಪರಿಶೀಲನೆ ನಡೆಸಿದ್ದು, ನೆರೆಪೀಡಿತ ರಾಜ್ಯಗಳ ಸಿಎಂಗಳ ಜತೆ ಚರ್ಚಿಸಿದ್ದಾರೆ.
ಅವುಗಳಲ್ಲಿ ಕೇರಳ, ಅಸ್ಸಾಂ, ಬಿಹಾರ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದ ಸಿಎಂಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು. ಕರ್ನಾಟಕ ಸಿಎಂ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಭಾಗವಹಿಸಿದ್ದರು.
ಪ್ರವಾಹ ಮುನ್ಸೂಚನೆಗೆ ಶಾಶ್ವತ ವ್ಯವಸ್ಥೆಯೊಂದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯದ ಎಲ್ಲಾ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ ಏರ್ಪಡಬೇಕು . ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುವಂತೆ ಪ್ರಧಾನಿ ಸಲಹೆ ನೀಡಿದರು.
ಸ್ಥಳೀಯವಾಗಿ ಮುನ್ಸೂಚನೆ ನೀಡುವಂಥ ಎಚ್ಚರಿಕೆ ವ್ಯವಸ್ಥೆಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡಬೇಕು. ನದಿ ಅಪಾಯದ ಮಟ್ಟ ಮೀರಿ ಹರಿಯುವುದು, ಮುಳುಗಡೆ ಸ್ಥಿತಿ ಅಥವಾ ಸಿಡಿಲು ಮತ್ತಿತರ ಅಪಾಯಗಳು ಎದುರಾದಾಗ ಸ್ಥಳೀಯ ಮಟ್ಟದಲ್ಲೇ ಜನರಿಗೆ ಎಚ್ಚರಿಕೆ ನೀಡಲು ಇದು ಸಹಾಯಕವಾಗುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಪ್ರವಾಹ ಪರಿಹಾರ ಸಾಮಗ್ರಿಗಳಲ್ಲಿ ಮಾಸ್ಕ್, ಕೈತೊಳೆಯುವ ವ್ಯವಸ್ಥೆ, ಸ್ಯಾನಿಟೈಸರ್‌ಗಳೂ ಒಳಗೊಂಡಿರುವಂತೆ ನೋಡಿಕೊಳ್ಳಿ. ಪ್ರವಾಹ ಸ್ಥಿತಿಯ ನಡುವೆಯೇ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳು ಪಾಲನೆಯಾಗುವಂತೆ ನೋಡಿಕೊಳ್ಳಿ ಎಂದು ಸುಮಾರು ಒಂದೂವರೆ ತಾಸು ನಡೆದ ಸಂವಾದಲ್ಲೇ ಮೋದಿ ಸೂಚಿಸಿದ್ದಾರೆ.
ರಾಜ್ಯದ 885 ಗ್ರಾಮಗಳು ನೆರೆಯಿಂದ ತತ್ತರಿಸಿವೆ. ಆರು ಹಾನಿಗೀಡಾದ ಜಿಲ್ಲೆಗಳು: ಬೆಳಗಾವಿ, ರಾಯಚೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ. 56 ಹಾನಿಗೀಡಾದ ತಾಲೂಕುಗಳು. 3000 ಹಾನಿಗೊಂಡ ಮನೆಗಳ ಸಂಖ್ಯೆ. 80 ಸಾವಿರ ಹೆಕ್ಟೇರ್ ಕೃಷಿ, ತೋಟಗಾರಿಕೆ ಬೆಳೆ ನಾಶ. 3,500 ಕಿ.ಮೀ. -ರಸ್ತೆ ಹಾಳು. 104 ಸಣ್ಣ ನೀರಾವರಿ ಕೆರೆಗಳಿಗೆ ಹಾನಿ. 394 ಕಟ್ಟಡಗಳಿಗೆ ಹಾನಿ