ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರನ್ನು ಮುಗಿಸೋಕೆ ಕೈ ಮುಖಂಡ ಹಾಗೂ ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಸುಪಾರಿ ಕೊಟ್ಟಿದ್ದಾರೆನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ರಾಜಕೀಯವಾಗಿ ಮುಗಿಸೋಕೆ ನಡೆಸಲಾದ ಪ್ರಯತ್ನಗಳೆಲ್ಲಾ ವಿಫಲವಾದ ಹಿನ್ನೆಲೆಯಲ್ಲಿ ಜೀವವನ್ನೇ ತೆಗೆದರೆ ಅಧ್ಯಾಯವೇ ಮುಗಿದೋಗುತ್ತದೆ ಎಂದು ಗೋಪಾಲಕೃಷ್ಣ ಮಾತನ್ನಾಡಿದ್ದಾರೆನ್ನುವ ವಿಡಿಯೋ ಈಗಾಗಲೇ ಎಲ್ಲಾ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
ವಿಶ್ವನಾಥ್ ಅವರನ್ನು ಮುಗಿಸೋಕೆ ಗೋಪಾಲಕೃಷ್ಣ ರೌಡಿ ಜಗತ್ತಿನಲ್ಲಿ ಒಂದಷ್ಟು ಹೆಸರು ಮಾಡಿರುವ ಕುಳ್ಳ ದೇವರಾಜ್ ಎನ್ನುವವನ ಜತೆ ಮಾತನಾಡುತ್ತಿರುವ ವಿಡಿಯೋಗಳು ಈಗ ರಾಜಕೀಯ ಪಡಸಾಲೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿವೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿಶ್ವನಾಥ್ ವಿರುದ್ಧ ಹೀನಾಯವಾಗಿ ಸೋಲು ಕಂಡಿದ್ದ ಗೋಪಾಲಕೃಷ್ಣ ತಮ್ಮ ಮುಂದಿನ ರಾಜಕೀಯ ಅಸ್ಥಿತ್ವ ಹಾಗೂ ಭವಿಷ್ಯಕ್ಕಾಗಿ ವಿಶ್ವನಾಥ್ ಅವರನ್ನೆ ಮುಗಿಸೋಕೆ ಇಂತದ್ದೊಂದು ಸಂಚು ಮಾಡಿದ್ದರಾ..?
ತನ್ನ ದಾರಿಗೆ ಅಡ್ಡಲಾಗಿರುವುದೇ ವಿಶ್ಚನಾಥ್, ಹಾಗಾಗಿ ಅವರನ್ನೇ ಇಲ್ಲವಾಗಿಸಿದ್ರೆ ರಾಜಕೀಯವಾಗಿ ಸೃಷ್ಟಿಯಾಗುವ ನಿರ್ವಾತವನ್ನು ತಾವು ತುಂಬ ಬಹುದು.. ಶಾಶ್ವತವಾಗಿ ಯಲಹಂಕವನ್ನು ತನ್ನದಾಗಿಸಿಕೊಳ್ಳಬಹುದೆನ್ನುವ ದುರಾಲೋಚನೆಯಲ್ಲಿ ಹೀಗೆ ಮಾಡಿದ್ರಾ..? ಗೊತ್ತಿಲ್ಲ. ಆದ್ರೆ ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜ್ ನಡುವಿನ ಸಂಭಾಷಣೆಯ ಗೂಡಾರ್ಥ ಇಂತದ್ದೊಂದು ಸ್ಫೋಟಕ ವಿಚಾರವನ್ನು ಸಾರಿ ಹೇಳುವಂತಿದೆ.
ಕೆಲವು ಮೂಲಗಳ ಪ್ರಕಾರ ಈ ವಿಡಿಯೋ ಗೋಪಾಲಕೃಷ್ಣ ಅವರ ಮನೆಯಲ್ಲೇ ಚಿತ್ರೀಕರಣವಾಗಿದೆ ಎನ್ನಲಾಗುತ್ತಿದೆ. ಕಳೆದ 6 ತಿಂಗಳ ಹಿಂದೆ ಚಿತ್ರೀಕರಣವಾಗಿರಬಹುದಾದ ವಿಡಿಯೋವನ್ನು ವಿಶ್ವನಾಥ್ ಅವರನ್ನು ಮುಗಿಸುವ ಸುಪಾರಿ ಪಡೆಯಲಿದ್ದ ದೇವರಾಜ್ ಚಿತ್ರೀಕರಿಸಿದ್ನಾ ಎನ್ನುವುದು ಗೊತ್ತಾಗುತ್ತಿಲ್ಲ. ಮಾತಿನ ಲಹರಿಯಲ್ಲಿ ವಿಶ್ವನಾಥ್ ಅವರನ್ನು ಮುಗಿಸಲು ಮಾಡಿರುವ ಪ್ಲ್ಯಾನ್ ನ್ನು ಕುಳ್ಳ ದೇವರಾಜ್ ಜತೆ ಹಂಚಿಕೊಳ್ಳುವಾಗ ಈ ವಿಡಿಯೋವನ್ನು ಗೌಪ್ಯವಾಗಿ ಚಿತ್ರೀಕರಿಸಿಕೊಳ್ಳಲಾಗಿದೆ.
ರಹಸ್ಯವಾಗಿ ನಡೆಯೋ ಮಾತುಕತೆಯ ವಿಡಿಯೋವನ್ನು ಕುಳ್ಳ ದೇವರಾಜ್ ಅವನೇ ಚಿತ್ರೀಕರಿಸಿದ್ನಾ ಎನ್ನುವ ಅನುಮಾನ ಕಾಡುತ್ತಿದೆ.ಅಥವಾ ದೇವರಾಜ್ ಜತೆ ಇದ್ದ ಇನ್ನ್ಯಾರಾದ್ರೂ ಕದ್ದುಮುಚ್ಚಿ ವಿಡಿಯೋ ಮಾಡಿದರಾ ಎನ್ನುವುದಕ್ಕೆ ಸದ್ಯಕ್ಕೆ ಯಾವುದೆ ಸ್ಪಷ್ಟತೆ ಸಿಗುತ್ತಿಲ್ಲ.
ಗೋಪಾಲಕೃಷ್ಣ ಜತೆ ಆತ್ಮೀಯವಾಗೇ ಇದ್ದ ಕುಳ್ಳ ದೇವರಾಜ್ ಜತೆ ಇಷ್ಟೊಂದು ರಹಸ್ಯವಾದ ಮಾತುಕತೆ ಆಡುವಾಗ ಇದೆಲ್ಲಾ ಹೇಗೆ ಚಿತ್ರೀಕರಿಲ್ಪಡ್ತು..? ದೇವರಾಜ್ ಬೇಕಂತಲೇ ಇಂತದ್ದೊಂದು ವಿಡಿಯೋವನ್ನು ತಾನೇ ಗೌಪ್ಯವಾಗಿ ಚಿತ್ರಿಕರಿಸಿಕೊಂಡ್ನಾ..? ಇದರಿಂದೆ ಇರಬಹುದಾದ ಉದ್ದೇಶವೇನು..? ಬೇರೆ ಏನಾದ್ರೂ ಕುತಂತ್ರವಿತ್ತಾ…?
ಎಸ್.ಆರ್ ವಿಶ್ಚನಾಥ್ ಅವರ ಕಡೆಯವರೇ ಇಂತದ್ದೊಂದು ಕೆಲಸ ಮಾಡಿಸಿದ್ರಾ..? ಗೋಪಾಲಕೃಷ್ಣ ಅವರನ್ನು ರಾಜಕೀಯವಾಗಿ ಶಾಶ್ವತವಾಗಿ ಮುಗಿಸುವ ಹುನ್ನಾರದ ಭಾಗವಾಗಿಯೇ ಇಂತದ್ದೊಂದು ಕೃತ್ಯವನ್ನು ನಡೆಸಲಾಯಿತೇ..? ಇದರಿಂದ ಯಾರಿಗೇನು ಪ್ರಯೋಜನವಿದೆ..? ಎನ್ನುವ ಸಾಕಷ್ಟು ಪ್ರಶ್ನೆಗಳು ಈ ಎಲ್ಲಾ ಎಪಿಸೋಡ್ ಹಿನ್ನೆಲೆಯಲ್ಲಿ ಕಾಡುತ್ತಿವೆ.