ಹಾವೇರಿ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ರಾಜ್ಯದ ಹಾಗೂ ಗಡಿನಾಡು ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಜರುಗಲಿದ್ದು, ನವಂಬರ್ 21 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ಜರುಗಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ-2021ರ ಚುನಾವಣಾಧಿಕಾರಿಯಾದ ಹಾವೇರಿ ತಾಲೂಕು ತಹಸೀಲ್ದಾರ್ ಗಿರೀಶ ಸ್ವಾದಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ 2021ರ ಜಿಲ್ಲಾ ಚುನಾವಣಾಧಿಕಾರಿಗಳಾಗಿ ಜಿಲ್ಲಾ ಕೇಂದ್ರದ ತಹಸೀಲ್ದಾರ್ ಅವರನ್ನು ನೇಮಕ ಮಾಡಲಾಗಿದೆ. ಸುಗಮ ಮತದಾನಕ್ಕಾಗಿ ಜಿಲ್ಲೆಯಲ್ಲಿ 13 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ 8,499 ಮತದಾರರಿದ್ದಾರೆ ಎಂದು ತಿಳಿಸಿದ್ದಾರೆ.
ನವಂಬರ್ 21 ರಂದು ನಡೆಯುವ ಸಾಹಿತ್ಯ ಪರಿಷತ್ ಚುನಾವಣೆಗೆ ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕಾಗಿ ನಾಲ್ಕು ಜನ ಸ್ಪರ್ಧೆಯಲ್ಲಿದ್ದು, ಸುಗಮ ಮತದಾನಕ್ಕಾಗಿ ಹಾವೇರಿ, ರಾಣೇಬೆನ್ನೂರಿನಲ್ಲಿ ತಲಾ ಮೂರು ಮತಗಟ್ಟೆ, ಹಾನಗಲ್‍ನಲ್ಲಿ ಎರಡು ಹಾಗೂ ಬ್ಯಾಡಗಿ, ಹಿರೇಕೆರೂರು, ರಟ್ಟಿಹಳ್ಳಿ, ಶಿಗ್ಗಾಂವ ಹಾಗೂ ಸವಣೂರಿನಲ್ಲಿ ತಲಾ ಒಂದು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತದಾನ ಪ್ರಕ್ರಿಯೆಗಾಗಿ ಈಗಾಗಲೇ ಸಿಬ್ಬಂದಿಗಳನ್ನು ನಿಯೋಜಿಸಿ ತರಬೇತಿ ನೀಡಲಾಗಿದೆ. ನವಂಬರ್ 20 ರಂದು ಆಯಾ ಮತಗಟ್ಟೆಗಳಿಗೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.
ಮತದಾನ ಕಾರ್ಯ ಮುಕ್ತಾಯದ ನಂತರ ಅಂದೆ ಮತ ಎಣಿಕೆ ಕಾರ್ಯವು ಕೂಡಾ ಜರುಗಲಿದೆ. ಜಿಲ್ಲೆಯ ಎಲ್ಲ ತಾಲೂಕಿನ ಮತದಾನದ ಅಂಕಿ ಅಂಶಗಳನ್ನು ಕ್ರೂಢಿಕರಿಸಿ ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ಘೋಷಿಸುತ್ತಾರೆ. ರಾಜ್ಯಾಧ್ಯಕ್ಷರ ಆಯ್ಕೆಗಾಗಿ ಮತದಾನದ ವಿವರಗಳನ್ನು ಬೆಂಗಳೂರು ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂದು ಗಿರೀಶ ಸ್ವಾದಿ ತಿಳಿಸಿದ್ದಾರೆ.